ಸಿಎಂಗೆ ಮಳೆ ಹಾನಿ ವರದಿ ನೀಡಿದ ಶಾಸಕರು

Published : Aug 01, 2025, 10:12 AM IST
Karnataka Chief Minister Siddaramaiah (Photo/ANI)

ಸಾರಾಂಶ

ಸ್ವಪಕ್ಷೀಯ ಶಾಸಕರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಸರಣಿ ಸಭೆ ಸತತ ಮೂರನೇ ದಿನವೂ ಮುಂದುವರೆಯಿತು.

  ಬೆಂಗಳೂರು :  ಸ್ವಪಕ್ಷೀಯ ಶಾಸಕರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಸರಣಿ ಸಭೆ ಸತತ ಮೂರನೇ ದಿನವೂ ಮುಂದುವರೆಯಿತು. ವಿಧಾನಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಒಟ್ಟು ಒಂಬತ್ತು ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದರು.

ಬೆಳಗ್ಗೆ 11.30ರಿಂದ ರಾತ್ರಿ 7 ಗಂಟೆವರೆಗೂ ನಡೆದ ಸರಣಿ ಸಭೆಗಳಲ್ಲಿ ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಪ್ರಮುಖವಾಗಿ ಮಳೆಗಾಲದ ಹಿನ್ನೆಲೆಯಲ್ಲಿ ಕ್ಷೇತ್ರಗಳಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿ, ಮಳೆಯಿಂದ ಮನೆ, ಬೆಳೆ ಹಾನಿ ಹಾಗೂ ವಿವಿಧ ಬೆಳೆಗಳಿಗೆ ರೋಗ ಬಾಧೆಗೆ ಸರ್ಕಾರ ಸಂಬಂಧಪಟ್ಟ ಸಂತ್ರಸ್ತರು ಮತ್ತು ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಶಾಸಕರು ಮನವಿ ಮಾಡಿದರು. ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ರಸಗೊಬ್ಬರ ಕೊರತೆ ಬಗ್ಗೆಯೂ ಶಾಸಕರು ಸಿಎಂ ಗಮನಕ್ಕೆ ತಂದಿದ್ದಾಗಿ ತಿಳಿದು ಬಂದಿದೆ.

ಶಾಸಕರ ಸಮಸ್ಯೆಗಳನ್ನು ಆಲಿಸಿದ ಸಿಎಂ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 50 ಕೋಟಿ ರು. ಅನುದಾನ ಒದಗಿಸಲಾಗಿದೆ. ಈ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ. ಮಳೆಯಿಂದ ತಮ್ಮ ಕ್ಷೇತ್ರಗಳಲ್ಲಿ ಆದ ಜನ, ಜಾನುವಾರುಗಳ ಪ್ರಾಣ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಿ. ಮನೆಗಳಿಗೆ ಹಾನಿಯಾಗಿದ್ದರೆ, ಬೆಳೆ ಹಾನಿಯಾಗಿದ್ದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡುವುದು ಶಾಸಕರ ಕರ್ತವ್ಯ ಎಂದು ಸೂಚಿಸಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ತಿಳಿಸಿದರು.

ಸಿಎಂ ದಿಲ್ಲಿಯಿಂದ ವಾಪಸಾದ ಬಳಿಕ ಉಳಿದ ಜಿಲ್ಲೆಗಳ ಸಭೆ

ಗುರುವಾರದ ವರೆಗೆ ಒಟ್ಟು 24 ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಲಾಗಿದೆ. ಉಳಿದ ಏಳು ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ ಸೇರಿ ಆರು ಜಿಲ್ಲೆಗಳ ಸಭೆಯನ್ನು ಶುಕ್ರವಾರ ನಡೆಸಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರು ಆ.1 ಮತ್ತು 2ರಂದು ದೆಹಲಿ ಪ್ರವಾಸ ಕೈಗೊಳ್ಳುವುದರಿಂದ ಈ ಜಿಲ್ಲೆಗಳ ಸಭೆ ಮುಂದೂಡಲಾಗಿದೆ. ಇನ್ನು ಬೆಂಗಳೂರು ನಗರ ಜಿಲ್ಲಾ ಶಾಸಕರ ಸಭೆಯನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಹಾಗಾಗಿ ಈ ಎರಡೂ ಸಭೆಗಳು ಸಿಎಂ ದೆಹಲಿಯಿಂದ ಮರಳಿದ ಬಳಿಕ ನಿಗದಿಯಾಗಲಿವೆ ಎಂದು ತಿಳಿದು ಬಂದಿದೆ.

ಇನ್ನು ರಸಗೊಬ್ಬರ ಕೊರತೆ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯಕ್ಕೆ ಹೆಚ್ಚುವರಿಯಾಗಿ ಬೇಕಿರುವ ಯೂರಿಯಾ, ರಸಗೊಬ್ಬರ ಸರಬರಾಜು ಮಾಡಲು ಕೋರಿದ್ದೇವೆ. ಅಗತ್ಯಬಿದ್ದರೆ ನಮ್ಮ ಕೃಷಿ ಸಚಿವರು ಮತ್ತೊಮ್ಮೆ ದೆಹಲಿಗೆ ನಿಯೋಗ ತೆರಳಿ ಕೇಂದ್ರ ರಸಗೊಬ್ಬ ಸಚಿವರನ್ನು ಭೇಟಿ ಮಾಡಲಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗಿವೆ. ಕೇಂದ್ರದಿಂದ ಗೊಬ್ಬರ ಬಂದ ಕೂಡಲೇ ಪೂರೈಸಲಾಗುವುದು ಎಂದು ತಿಳಿಸಿದರು ಎಂದು ತಿಳಿದು ಬಂದಿದೆ.

ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಬೇಕು:

ಉಳಿದಂತೆ ಇತರೆ ಜಿಲ್ಲೆಗಳ ಶಾಸಕರಿಗೆ ನೀಡಿದ ಸಲಹೆಯಂತೆಯೇ ಶಾಸಕರು ಹಾಗೂ ಉಸ್ತುವಾರಿ ಸಚಿವರು ಕ್ಷೇತ್ರದ ಕಾಮಗಾರಿಗಳ ಸಮಸ್ಯೆ, ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಕೆಡಿಪಿ ಸಭೆಗಳಲ್ಲೇ ಬಗೆಹರಿಸಿಕೊಳ್ಳಿ. ಉಸ್ತುವಾರಿ ಸಚಿವರು ಶಾಸಕರ ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ.

ಎಲ್ಲಾ ಕೆಡಿಪಿ ಸಭೆಗಳಲ್ಲೂ ಶಾಸಕರು, ಸಚಿವರು ಪಾಲ್ಗೊಳ್ಳಬೇಕು. ಜನರ ಸಮಸ್ಯೆಗಳ ಬಗ್ಗೆ, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು‌ ವಿಳಂಬ ಧೋರಣೆ ಬಗ್ಗೆ ಕೆಡಿಪಿ ಸಭೆಗಳಲ್ಲೇ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿ ಗತಿ, ಕೃಷಿ ಚಟುವಟಿಕೆಗಳು ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗದಿ ಮಾಡಿ ಅಧಿಕಾರಿಗಳನ್ನು ಚುರುಕುಗೊಳಿಸಬೇಕು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ತಲಾ ಆದಾಯ ಇಡೀ ದೇಶದಲ್ಲೇ ನಂ.1 ಆಗಿದೆ. ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಮುಖ್ಯಮಂತ್ರಿಗಳು ಅರ್ಧಗಂಟೆ ಸಭೆ ಮಾಡಿ ಸಮಸ್ಯೆ ಆಲಿಸಿದರು. ನಮ್ಮ ಸಮಸ್ಯೆಗಳನ್ನು ಹೇಳಿದ್ದೇವೆ. ಹೆಚ್ಚಿನ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆ. ಉಸ್ತುವಾರಿ ಸಚಿವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸ್ಪಂದಿಸದಿದ್ದರೆ ನಾವು ಬಿಡುವುದಿಲ್ಲ.

- ಬೇಳೂರು ಗೋಪಾಲಕೃಷ್ಣ, ಸಾಗರ ಶಾಸಕ

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು