ರಾಷ್ಟ್ರದ್ರೋಹ ರೀತಿ ನಾಡದ್ರೋಹ ಕಾಯ್ದೆಗೆ ಒತ್ತಡ ಕನ್ನಡ, ಕನ್ನಡಿಗರನ್ನು ಅವಮಾನಿಸುವ ಪ್ರಕರಣಗಳು ಹೆಚ್ಚಳ

Published : Nov 01, 2024, 08:32 AM IST
Kannada Flag

ಸಾರಾಂಶ

ಕರುನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ತೀವ್ರಗೊಂಡಿರುವ ವಲಸಿಗರ ಅಬ್ಬರ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡಿಗರನ್ನು ಅವಮಾನಿಸುವ, ಹೀಗಳೆಯುವ ಮಟ್ಟ ಮುಟ್ಟಿದೆ.  

 ವೆಂಕಟೇಶ್‌ ಕಲಿಪಿ/ಸಂಪತ್‌ ತರೀಕೆರೆ

 ಬೆಂಗಳೂರು : ಕರುನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ತೀವ್ರಗೊಂಡಿರುವ ವಲಸಿಗರ ಅಬ್ಬರ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡಿಗರನ್ನು ಅವಮಾನಿಸುವ, ಹೀಗಳೆಯುವ ಮಟ್ಟ ಮುಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‌ಟ್ಯಾಗ್‌ ಬಳಸಿ ಕನ್ನಡಿಗರ ಆತ್ಮಾಭಿಮಾನಕ್ಕೆ ಕುಂದು ತರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ.

ಇದರಿಂದ ಕ್ರುದ್ಧರಾಗಿರುವ ಕನ್ನಡ ಹೋರಾಟಗಾರರು, ಬುದ್ಧಿಜೀವಿಗಳು ಹಾಗೂ ಕಾನೂನು ತಜ್ಞರು ದೇಶದ ಆಸ್ಮಿತೆಗೆ ಧಕ್ಕೆಯುಂಟಾಗುವಂತೆ ವರ್ತಿಸುವವರ ವಿರುದ್ಧ ದೇಶದ್ರೋಹ ಕಾಯ್ದೆ ರಾಷ್ಟ್ರಮಟ್ಟದಲ್ಲಿ ಇರುವಂತೆಯೇ ರಾಜ್ಯದ ಹಿತ ಕಾಪಾಡಲು ರಾಷ್ಟ್ರದ್ರೋಹದ ಮಾದರಿಯಲ್ಲೇ ನಾಡದ್ರೋಹದ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಹೊಸ ಶಾಸನವನ್ನೇ ರೂಪಿಸುವಂತೆ ಆಗ್ರಹಿಸಿದ್ದಾರೆ.

ಭಾರತೀಯ ಸಂವಿಧಾನದಲ್ಲಿ ಇಂತಹ ಕಾಯ್ದೆ ರೂಪಿಸಲು ಅವಕಾಶವಿದೆ. ಮಹಾರಾಷ್ಟ್ರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಇಂತಹ ಕಾಯ್ದೆಗಳು ಜಾರಿಯಲ್ಲಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡ ಅಸ್ಮಿತೆಯನ್ನು ಕಾಪಾಡುವ ಶಾಸನ ರೂಪುಗೊಳ್ಳಬೇಕು. ಅದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ.

ತಜ್ಞರು ಹೇಳೋದೇನು?:

ಕನ್ನಡ-ನಾಡು, ನುಡಿ ಬಗ್ಗೆ ಅವಹೇಳನ ಮಾಡುವ ಕೃತ್ಯವನ್ನು ವ್ಯಾಖ್ಯಾನಿಸುವ ಮತ್ತು ಅಂತಹ ಕೃತ್ಯ ಎಸಗಿದವರನ್ನು ಶಿಕ್ಷಿಸುವ ನಿರ್ದಿಷ್ಟ ಕಾನೂನು ಕರ್ನಾಟಕದಲ್ಲಿಯೂ ಜಾರಿಗೆ ತರಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ ಅವರು, ‘ನಾಡದ್ರೋಹ ಅಪರಾಧ ಬಗ್ಗೆ ನಿರ್ದಿಷ್ಟ ವ್ಯಾಖ್ಯಾನ ಮಾಡಬೇಕಾದರೆ, ಬಿಎನ್‌ಎಸ್‌ ಸೆಕ್ಷನ್‌ 196 ಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಬೇಕು. ಇಲ್ಲವೇ, ನಾಡಗೀತೆಗೆ ಸಂಬಂಧಿಸಿದ ಕಾನೂನಲ್ಲಿ ಹೊಸ ಕಾನೂನು ಸೇರಿಸಬೇಕಾಗುತ್ತದೆ. ಸರ್ಕಾರವು ಪ್ರತ್ಯೇಕ ನಿಯಮಗಳನ್ನು ರೂಪಿಸಿ, ವಿಧಾನಮಂಡಲದ ಉಭಯ ಸದನಗಳಲ್ಲಿಯೂ ಅಂಗೀಕಾರ ಪಡೆದುಕೊಂಡು ಜಾರಿಗೊಳಿಸಬಹುದು’ ಎಂದು ಹೇಳುತ್ತಾರೆ.

ದೇಶದ್ರೋಹದ ವ್ಯಾಖ್ಯಾನ:

ದೇಶದ್ರೋಹ ಅಪರಾಧ ಎಂದರೆ ಏನು ಮತ್ತು ಆ ಕೃತ್ಯದಲ್ಲಿ ಭಾಗಿಯಾದವರಿಗೆ ಎಷ್ಟು ಶಿಕ್ಷೆ ವಿಧಿಸಬೇಕು ಎಂಬುದನ್ನು ಹಿಂದಿನ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 124ರಲ್ಲಿ ವ್ಯಾಖ್ಯಾನಿಸಲಾಗಿದೆ. ಕಳೆದ ಜುಲೈನಿಂದ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್‌ 152ರಲ್ಲಿಯೂ ದೇಶದ್ರೋಹ ಅಪರಾಧವನ್ನು ವ್ಯಾಖ್ಯಾನಿಸಲಾಗಿದೆ. ವಿವಿಧ ಧಾರ್ಮಿಕ, ಜನಾಂಗೀಯ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು ಅಥವಾ ಸಮುದಾಯಗಳ ನಡುವೆ ದ್ವೇಷ ಅಥವಾ ದ್ವೇಷ ಅಥವಾ ದುಷ್ಟ ಭಾವನೆಗಳನ್ನು ಪ್ರಚೋದಿಸುವ ಕೃತ್ಯ ಎಸಗಿದರೆ ಅದಕ್ಕೆ ಪ್ರಕರಣ ದಾಖಲಿಸಿ ತನಿಖೆ ನಡೆಸಬಹುದು ಎಂದು ಬಿಎನ್‌ಎಸ್‌ ಸೆಕ್ಷನ್‌ 196ರಲ್ಲಿ ಹೇಳಲಾಗಿದೆ.

ದೇಶದ್ರೋಹ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಬಹುದು. ತನಿಖೆ ನಡೆಸಬಹುದು. ಅದು ಸಜ್ಞೇಯ ಅಪರಾಧ ಕೃತ್ಯವಾಗುತ್ತದೆ. ಅಂತಹ ಅಪರಾಧ ಎಸಗಿದವರಿಗೆ ಐದು ವರ್ಷದವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಹುದಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಡದ್ರೋಹ ಕಾನೂನು ಜಾರಿಗೊಳಿಸಲು ಅವಕಾಶವಿದೆ. ಇದಕ್ಕೆ ಬಿಎನ್‌ಎಸ್‌ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ.

ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ:

ಪ್ರಸ್ತುತ ಕನ್ನಡ ಭಾಷೆಯ ಆಧಾರದ ಮೇಲೆ ದ್ವೇಷದ ಭಾಷಣ ಮಾಡುವುದು, ದ್ವೇಷ ಭಾವನೆ ಹುಟ್ಟುಹಾಕುವುದು ಸಹ ಅಪರಾಧವಾಗಿದೆ. ಸಾಮರಸ್ಯ ಧಕ್ಕೆ ಉಂಟುಮಾಡಲು ಪ್ರಚೋದನೆ ನೀಡುವ ಹಾಗೂ ಗಲಭೆ ಉಂಟುಮಾಡುವ ಉದ್ದೇಶದಿಂದ ಹೇಳಿಕೆ ನೀಡುವುದು ಐಪಿಸಿ ಸೆಕ್ಷನ್‌ 153ಎ ಅಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಬಹುದು.

ಆದರೆ, ಈ ಕಲಂ ನಡಿ ಕನ್ನಡ ಹಾಗೂ ಕನ್ನಡಿಗರನ್ನು ಹೀಗಳೆಯುವುದು ಹಾಗೂ ಅವಮಾನ ಮಾಡುವ ಕೃತ್ಯ ಎಸೆಗಿದರೂ ಸಾಮರಸ್ಯಕ್ಕೆ ಧಕ್ಕೆ ತರುವ ಹೆಸರಿನಲ್ಲಿ ಶಾಂತಿ ಭಂಗ ಮಾಡಿದರು ಎಂದು ಪ್ರಕರಣ ದಾಖಲಿಸಬಹುದು. ಇದಕ್ಕೆ ಗಂಭೀರ ಶಿಕ್ಷೆ ಸಿಗುವುದಿಲ್ಲ. ಆದರೆ, ಇದನ್ನು ದೇಶದ್ರೋಹದಂತೆ ಪ್ರತ್ಯೇಕ ಕಾಯ್ದೆ ತರುವುದು ಹಾಗೂ ಬಿಎನ್‌ಎಸ್‌ ಸೆಕ್ಷನ್‌ 196ಗೆ ತಿದ್ದುಪಡಿ ತರುವ ಕೆಲಸ ಮಾಡಿದರೆ ಆಗ ಕಠಿಣ ಶಿಕ್ಷೆ ವಿಧಿಸುವಂತಾಗಬಹುದು.

ಏಕೆಂದರೆ, ಈಗ ನಾಡದ್ರೋಹದ ಎಂಬ ಅಪರಾಧವನ್ನು ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಹಾಗಾಗಿ ನಾಡದ್ರೋಹ ತಡೆಗೆ ಸರ್ಕಾರ ತನ್ನ ಅಧಿಕಾರ ಬಳಸಿಕೊಂಡು ಹೊಸ ಕಾಯ್ದೆ ಜಾರಿಗೊಳಿಸಲು ಅವಕಾಶವಿದೆ ಎಂಬುದು ಹೈಕೋರ್ಟ್‌ನಲ್ಲಿ ಎನ್‌ಐಎ ಮತ್ತು ಸಿಬಿಐ ಅನ್ನು ಪತಿನಿಧಿಸುವ ವಕೀಲ ಪಿ.ಪ್ರಸನ್ನ ಕುಮಾರ್‌ ಅವರ ಅಭಿಪ್ರಾಯ.

ಕನ್ನಡಿಗನೇ ಸಾರ್ವಭೌಮ

ಇಲ್ಲಿ ಕನ್ನಡ, ಕನ್ನಡಿಗನೇ ಸಾರ್ವಭೌಮ. ನಾಡು, ನುಡಿ, ಸಂಸ್ಕೃತಿ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರಬೇಕು. ಕನ್ನಡ, ಕನ್ನಡಿಗರನ್ನು ಅವಹೇಳನ ಮಾಡುವುದು ನಾಡದ್ರೋಹಕ್ಕೆ ಸಮ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾಡದ್ರೋಹ ಕಾಯ್ದೆ ರಚನೆಗೆ ಸಂವಿಧಾನದಲ್ಲಿ ಅವಕಾಶವಿದೆಯೇ ಎಂದು ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಣಯಿಸಬೇಕು. ಅವಕಾಶ ಇಲ್ಲದಿದ್ದರೆ ಹೊಸ ಶಾಸನವನ್ನೇ ಮಾಡಿದರೆ ಒಳಿತು.

- ಪದ್ಮಶ್ರೀ ದೊಡ್ಡರಂಗೇಗೌಡ, ನಿಕಟಪೂರ್ವ ಅಧ್ಯಕ್ಷ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಯನ ಅಗತ್ಯ

ಭಾರತೀಯ ದಂಡ ಸಂಹಿತೆ(ಐಪಿಸಿ) 124ಎ ರಾಷ್ಟ್ರದ್ರೋಹದ ಕುರಿತು ವ್ಯಾಖ್ಯಾನಿಸುತ್ತದೆ. ರಾಷ್ಟ್ರದ್ರೋಹ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಥವಾ 3 ವರ್ಷ ಸೆರೆವಾಸ. ಇಲ್ಲವೇ 3ರಿಂದ 7 ವರ್ಷದ ವರೆಗೆ ಜೈಲು ವಾಸವನ್ನು ವಿಸ್ತರಿಸಬಹುದಾಗಿದೆ. ಅದೇ ಮಾದರಿಯಲ್ಲಿ ನಾಡದ್ರೋಹದ ಬಗ್ಗೆ ಕಾನೂನು ರೂಪಿಸಬೇಕು. ಈ ಕಾನೂನು ಸಾಧ್ಯತೆ ಕುರಿತು ಕಾನೂನು ತಜ್ಞರು ಅಧ್ಯಯನ ನಡೆಸುವ ಅಗತ್ಯವಿದೆ.

- ಎಂ.ಎಚ್‌.ಮಹೇಶ್‌ಕುಮಾರ್‌, ಹಿರಿಯ ವಕೀಲರು

ಕಠಿಣ ನಿರ್ಬಂಧ ಬೇಕು

ರಾಜ್ಯ ಸರ್ಕಾರ ಮೊದಲು ತನ್ನ ಪರಮಾಧಿಕಾರವನ್ನು ಸಮರ್ಥವಾಗಿ ಬಳಸುವುದನ್ನು ಕಲಿಯಬೇಕು. ನಮ್ಮಲ್ಲಿ ಖಾಸಗಿ ಉದ್ಯಮ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮನ್ನ ಕಠಿಣ ನಿರ್ಬಂಧಗಳನ್ನು ವಿಧಿಸಬೇಕು. ಇಲ್ಲಿನ ಜಾಗ ಹೊರಗಿನವರು ಒತ್ತುವರಿ ಮಾಡದಂತೆ, ಇಲ್ಲಿನ ಉದ್ಯೋಗಗಳು ಅನ್ಯರ ಪಾಲಾಗದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ಸಮಾಲೋಚನೆ ಆಗಬೇಕು.

- ವಾಟಾಳ್‌ ನಾಗರಾಜ್‌, ಕನ್ನಡಪರ ಹೋರಾಟಗಾರ

ಕಡಿವಾಣ ಹಾಕಿ

ಕನ್ನಡದ ಭಾಷೆ, ನೆಲ,ಜಲ, ಜನರನ್ನು ಅವಹೇಳನ ಮಾಡುವ ವಿಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದಿಷ್ಟು ಶಾಸನಬದ್ಧ ಕಾನೂನುಗಳು ರಚನೆಯಾಗಬೇಕು. ಕಾನೂನು ಅಸ್ತ್ರದ ಮೂಲಕವೂ ಕನ್ನಡವನ್ನು ರಕ್ಷಿಸಿಕೊಳ್ಳುವ ಕೆಲಸ ಆಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಾಸನ ರಚನೆಯಲ್ಲಿ ಕನ್ನಡಪರ ಪ್ರತಿನಿಧಿಯ ಇರುವಿಕೆ ಕಡ್ಡಾಯವಾಗಬೇಕು.

- ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ