ನೆಲಮಂಗಲ: ಮಕ್ಕಳಿಗೆ ಜನ್ಮ ಕೊಡುವುದು ಮುಖ್ಯವಲ್ಲ. ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಂಸ್ಕಾರವಂತರಾಗಿ ಬೆಲೆಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂದು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನೆಲಮಂಗಲ ಉತ್ಸವದ ಪ್ರಯುಕ್ತ ಶಾಸಕ ಎನ್.ಶ್ರೀನಿವಾಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 2023-24-2024-25ರ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಶೇ.75ರಷ್ಟು ಅಂಕ ಪಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ದೇವರ ಬಳಿ ವಿದ್ಯೆ, ಉದ್ಯೋಗ ಹಾಗೂ ಆರೋಗ್ಯಕ್ಕಾಗಿ ನಿರಂತರ ಪ್ರಾರ್ಥನೆ ಮಾಡುತ್ತೇವೆ. 12ನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟುಹಾಕಿದ ಮಠಗಳು ಶೈಕ್ಷಣಿಕ ಕ್ರಾಂತಿ ಮಾಡುತ್ತಿವೆ. ರಾಜಕೀಯ ಎಂದರೇ ಕೇವಲ ವಿಧಾನಸೌಧಕ್ಕೆ ಮಾತ್ರ ಸೀಮಿತವಲ್ಲ, ಕ್ಷೇತ್ರದ ಅಭಿವೃದ್ಧಿ, ಜನರ ಯೋಗಕ್ಷೇಮ ವಿಚಾರಿಸಿ ಜನರಲ್ಲಿ ಬೆರೆಯುವ ಕಾರ್ಯ ಮಾಡಬೇಕಿದೆ ಹೇಳಿದರು.

ನೆಮ್ಮದಿಯ ಜೀವನವಿರಬೇಕು:

ಸಮಾಜದ ಹಣೆಬರಹ ಬದಲಾಯಿಸಲು ಬ್ರಹ್ಮನಿಂದ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಮಾತ್ರ ಬದಲಾವಣೆ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾಫಿಯ ಹೆಚ್ಚಾಗಿದ್ದು, ಅವುಗಳನ್ನು ತಳಮಟ್ಟದಲ್ಲಿ ನಿರ್ಮೂಲನೆ ಮಾಡಬೇಕಿದೆ. ಪಾಲಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ದೇವಾಲಯದಲ್ಲಿ ಶಿವ ನೆಮ್ಮದಿಯಾಗಿದ್ದು ಸಮಾಜದಲ್ಲಿ ಶಿವಭಕ್ತರು ನೆಮ್ಮದಿಯಾಗಿರಬೇಕಾಗಿದೆ ಎಂದರು. ಮೂರು ದಿನ ಕಾರ್ಯಕ್ರಮ :

ಶಾಸಕ ಶ್ರೀನಿವಾಸ್ ಮಾತನಾಡಿ, ಭವಿಷ್ಯದ ಪ್ರಜೆಗಳಿಗೆ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಅಂಕ ಪಡೆದುಕೊಳ್ಳಬೇಕು. ರಾಜ್ಯಕ್ಕೆ ಕ್ಷೇತ್ರದ ವಿದ್ಯಾರ್ಥಿಗಳು ಮಾದರಿಯಾಗಬೇಕು. ಮಕ್ಕಳಿಗೆ ಪ್ರೇರೆಪಣೆ, ಉತ್ತೇಜನ ಹಾಗೂ ಆತ್ಮಸ್ಥೈರ್ಯ ತುಂಬಲಾಗುತ್ತಿದೆ. ನೆಲಮಂಗಲ ಉತ್ಸವದ ಪ್ರಯುಕ್ತ ಮೊದಲ ಬಾರಿಗೆ ವಿಶೇಷವಾಗಿ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದರು.


ಶಾಸಕರ ಕಾರ್ಯ ಅಭಿನಂದನಾರ್ಹ:

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಪ್ರತಿಭೆಗಳಿದ್ದು ಗುರುತಿಸುವ ಕಾರ್ಯ ಮಾಡುತ್ತಿರುವ ಶಾಸಕರ ಕಾರ್ಯವೈಖ್ಯರಿ ಶ್ಲಾಘನೀಯ. ಯುವ ಪ್ರತಿಭೆಗಳು ನಮ್ಮ ರಾಜ್ಯ ಹಾಗೂ ದೇಶದ ಆಸ್ತಿ. ಜೋಪನವಾಗಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಜತೆಗೆ ಕ್ಷೇತ್ರದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಶಾಸಕರು ಅಭಿನಂದನಾರ್ಹರು ಎಂದರು.

ಪ್ರತಿಭಾ ಪುರಸ್ಕಾರ:

ಕಾರ್ಯಕ್ರಮದ ಪ್ರಯುಕ್ತ 2 ಶೈಕ್ಷಣಿಕ ವರ್ಷದ ಸುಮಾರು 4500 ಸಾವಿರಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.. ಜತೆಗೆ ವಿಶೇಷವಾಗಿ ಮಕ್ಕಳಿಗೆ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ರವಿ, ಮಾಜಿ ಸದಸ್ಯ ಬಿಎಂಎಲ್‌ ಕಾಂತರಾಜು, ಮಾಜಿ ಶಾಸಕ ಗೌರಿಶಂಕರ್, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯರಾದ ಸಿ.ಪ್ರದೀಪ್, ಪೂರ್ಣಿಮಾ, ಲೋಲಾಕ್ಷಿ, ಸುಜಾತ, ಸುಧಾ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್ ಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಬ್ಲಾಕ್ ಅಧ್ಯಕ್ಷ ಮಂಜುನಾಥ್ ಗೌಡ, ಹನುಮಂತೇಗೌಡ, ನಾಗರುದ್ರಶರ್ಮಾ, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ನಾಗರಾಜು, ಸಿ.ಎಂ.ಗೌಡ, ಕೆ.ಕೃಷ್ಣಪ್ಪ, ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌.............

ಹೊಸಪಯಣಕ್ಕೆ ಸಜ್ಜಾಗಿ: ಸಚಿವ ಡಾ.ಸುಧಾಕರ್‌

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಜಾಗತಿಕ ಪ್ರಪಂಚದಲ್ಲಿ ಶಿಕ್ಷಣದ ಮಹತ್ವ ಸಾಕಷ್ಟಿದೆ. ಸ್ಪಧಾತ್ಮಕ ಜಗತ್ತಿಗೆ ಕುಟಂಬದ ಗೌರವಯುತ ಬದುಕು ಕಟ್ಟಿಕೊಳ್ಳುವುದು ಶಿಕ್ಷಣ ಒಂದೇ ದಾರಿಯಾಗಿದೆ. ಗ್ರಾಮೀಣ ಭಾಗದ ತಂದೆ ತಾಯಿ ವಿದ್ಯಾಭ್ಯಾಸ ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕಾರ್ಯ ಮಾಡುತ್ತಿದ್ದಾರೆ. ತಮ್ಮ ಜೀವನದ ಬದುಕನ್ನು ಬದಲಾಯಿಸುವ ಹೊಸ ಪಯಣಕ್ಕೆ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ. ಕೌಶಲ್ಯ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಕಡಿಮೆ ಮಾಡಬೇಕು. ಸಮಾಜದಲ್ಲಿ ಸಾಕಷ್ಟು ಅವಕಾಶಗಳಿದ್ದು ಯಶಸ್ವಿ ಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಆಂಗ್ಲ ಭಾಷೆ ಮಾತನಾಡುವ ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:

ರಾಜ್ಯ ಸರ್ಕಾರ ಅಜೀತ್ ಪ್ರೇಮ್ ಜೀ ಫೌಂಡೇಷನ್‌ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ಹೆಣ್ಣು ಮಕ್ಕಳಿಗೆ ವಿಶೇಷ ಶೈಕ್ಷಣಿಕ ಒತ್ತು ನೀಡುತ್ತಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಬಳಿಕ ಯಾವುದೇ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಪದವಿ ಆಯ್ಕೆ ಮಾಡಿಕೊಂಡಲ್ಲಿ ಪ್ರತಿ ವರ್ಷ ಸುಮಾರು ೩೦ ಸಾವಿರ ರು. ವಿದ್ಯಾರ್ಥಿ ವೇತನ ನೀಡುತ್ತಿದೆ. ರಾಜ್ಯಾದ್ಯಂತ ೩೭ ಸಾವಿರ ಮಕ್ಕಳು ಸೌಲಭ್ಯ ಪಡೆದುಕೊಳ್ಳುತ್ತಿದ್ದು ಉಳಿಕೆ ಮಕ್ಕಳಿಗೆ ರಾಜ್ಯ ಸರ್ಕಾರ ಭರಿಸುತ್ತಿದೆ. ಸುಮಾರು 17 ರಾಜ್ಯದಲ್ಲಿ ಈ ಯೋಜನೆ ಜಾರಿಗೊಂಡಿದ್ದು ಕೇವಲ 5 ಸಾವಿರ ಮಾತ್ರ ಇದ್ದಾರೆ. ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುಸುತ್ತಿದೆ. ಎಲ್ಲಾ ಹೆಣ್ಣುಮಕ್ಕಳು ಸರ್ಕಾರಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಪ್ರತಿ ವರ್ಷ ಈ ಕಾರ್ಯ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು ಪದವಿಯಿಂದ ವಂಚಿತರಾಗಬಾರದು. ಪ್ರತಿ ವರ್ಷ ಉತ್ತೀರ್ಣರಾದರೇ ಮಾತ್ರ ಈ ಯೋಜನೆ ದೊರೆಯುತ್ತದೆ ಎಂದು ಸಚಿವ ಎಂ.ಸಿ.ಸುಧಾಕರ್ ಮಾಹಿತಿ ನೀಡಿದರು.

(ಫೋಟೋ ಕ್ಯಾಫ್ಞನ್‌)

ನೆಲಮಂಗಲದ ಡಾ.ಬಿ.ಆರ್.ಆಂಬೇಡ್ಕರ್ ಕ್ರೀಡಾಂಗಣದಲ್ಲಿ ಶಾಸಕ ಶ್ರೀನಿವಾಸ್ ನೇತೃತ್ವದ ನೆಲಮಂಗಲ ಉತ್ಸವದ ಪ್ರಯುಕ್ತ 2023-24 ಹಾಗೂ 2024-25ರ ಸಾಲಿನ ಪರೀಕ್ಷೆಯಲ್ಲಿ ಶೇ.75ರಷ್ಟು ಅಂಕ ಪಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರತಿಭಾ ಪುರಸ್ಕಾರ ವಿತರಿಸಿದರು.