ಕುಂದಗೋಳ: ಪ್ರತಿ ವರ್ಷ ಪ್ರವಾಹದಿಂದ ರೈತರಿಗೆ ಅಪಾರ ನಷ್ಟ ಉಂಟು ಮಾಡುತ್ತಿರುವ ಬೆಣ್ಣೆಹಳ್ಳದ ಉಪಹಳ್ಳಗಳ ಕಾಮಗಾರಿಯನ್ನು ಕುಂದಗೋಳ ತಾಲೂಕಿನಿಂದಲೇ ಆರಂಭಿಸಬೇಕು ಎಂದು ಶಾಸಕ ಎಂ.ಆರ್. ಪಾಟೀಲ್ ಆಗ್ರಹಿಸಿದ್ದಾರೆ.
ಪ್ರವಾಹದಿಂದಾಗಿ ಕುಂದಗೋಳ ತಾಲೂಕಿನಲ್ಲಿ ಪ್ರತಿ ವರ್ಷ 2100 ಎಕರೆಗೂ ಹೆಚ್ಚು ಬೆಳೆ ನಾಶವಾಗುತ್ತಿದೆ ಹಾಗೂ ಈ ಬಾರಿ ಕಟಾವಿಗೆ ಬಂದಿರುವ ರೈತರ ಹೆಸರು ಬೆಳೆ ಸಹ ಪ್ರವಾಹದಿಂದ ನಾಶವಾಗಿದೆ ಎಂದರು.
"ಬೆಣ್ಣಿಹಳ್ಳದ ಕಾಮಗಾರಿಗೆ ಸರ್ಕಾರ ಈಗಾಗಲೇ ₹200 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದು ನವಲಗುಂದ ತಾಲೂಕಿನಿಂದ ಆರಂಭವಾಗುತ್ತಿದ್ದು, ಪ್ರವಾಹದ ಮೂಲವಾದ ಕುಂದಗೋಳ ತಾಲೂಕಿನಿಂದಲೇ ಕಾಮಗಾರಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೂ ಪತ್ರ ಬರೆದಿದ್ದು, ₹83 ಕೋಟಿಗಳ ಡಿಪಿಆರ್‌ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಟೆಂಡರ್ ಆಗಿಲ್ಲ. ಕೂಡಲೇ ಈ ಪ್ರಕ್ರಿಯೆಗೆ ಮೊದಲ ಅನುಮೋದನೆ ನೀಡಬೇಕು ಎಂದರು.ಪಾಟೀಲ್ ಅವರ ಮಾತಿಗೆ ದನಿಗೂಡಿಸಿದ ಶಾಸಕರಾದ ಅರವಿಂದ ಬೆಲ್ಲದ್ ಮತ್ತು ಸಿ.ಸಿ. ಪಾಟೀಲ್, "ಬೆಣ್ಣೆಹಳ್ಳದಿಂದಾಗಿ ಪ್ರತಿ ವರ್ಷ 8 ಟಿಎಂಸಿ ನೀರು ಪೋಲಾಗುತ್ತಿದೆ ಮತ್ತು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಕುಂದಗೋಳದಿಂದ ಆರಂಭವಾಗಿ ನರಗುಂದದವರೆಗೆ ಹರಿಯುವ ಈ ಹಳ್ಳದ ಸಂಪೂರ್ಣ ಹೂಳೆತ್ತಿ ಸಮಗ್ರವಾಗಿ ಅಭಿವೃದ್ಧಿಪಡಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಆಗ್ರಹಿಸಿದರು.