ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅತ್ಯಂತ ಶ್ರೇಷ್ಠವಾಗಿರುವ ಭಗವದ್ಗೀತೆಯ ಗ್ರಂಥವು ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ, ಧರ್ಮಯೋಗ ಎಂಬ ಹಲವು ಜ್ಞಾನಗಳನ್ನು ಕೊಡುತ್ತದೆ. ಭಗವದ್ಗೀತೆಯ ಸಾರ ನಮ್ಮ ಮನೆಗಳಲ್ಲಿ ಹಾಗೂ ಮಕ್ಕಳಿಗೆ ಮುಟ್ಟಬೇಕು. ಇದಕ್ಕಾಗಿ ಭಗವದ್ಗೀತಾ ಜಿಲ್ಲಾ ಸಮಿತಿಯಿಂದ ಅಭಿಯಾನ ನಡೆಸುತ್ತಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ಸಾಕ್ಷಿದಾರರನ್ನು ಆರೋಪಿಗಳ ವಿಚಾರಣೆ ನಡೆಸುವ ವೇಳೆ ಮೊದಲು ಸತ್ಯವನ್ನು ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿ ವಿಚಾರಿಸಲಾಗುತ್ತದೆ. ಹೀಗಾಗಿ ಭಗವದ್ಗೀತೆ ಎಂಬುದು ಸಂವಿಧಾನಿಕವಾಗಿಯೇ ಮೊದಲಿನಿಂದಲೂ ಇದೆ. ಇದು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಿಲ್ಲ. ಹೀಗಾಗಿ ನವೆಂಬರ್ 4ರಿಂದ ಆರಂಭವಾಗಿ ಡಿಸೆಂಬರ್ 14ರ ವರೆಗೆ ಸುಮಾರು ಒಂದೂವರೆ ತಿಂಗಳು ನಡೆಯಲಿರುವ ಭಗವದ್ಗೀತಾ ಅಭಿಯಾನದಲ್ಲಿ ಜಿಲ್ಲಾದ್ಯಂತ ಪ್ರತಿಯೊಬ್ಬರು, ಮಕ್ಕಳು ಭಾಗವಹಿಸಬೇಕು. ಕೇವಲ ಭಗವದ್ಗೀತೆಯ ಪುಸ್ತಕ ಒಯ್ದು ಮನೆಯಲ್ಲಿ ಇರಿಸದೆ, ಎಲ್ಲರೂ ಭಗವದ್ಗೀತೆಯನ್ನು ಓದಬೇಕು, ಅದನ್ನು ಪಠಿಸಬೇಕು ಎಂದು ಹೇಳಿದರು.ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಅರುಣ ಶಹಾಪುರ ಮಾತನಾಡಿ, ನ.4ರಂದು ನಗರದ ಪಿಡಿಜೆ ವಿದ್ಯಾಸಂಸ್ಥೆಯಲ್ಲಿ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳಾದ ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಸಿಂದಗಿ ಸಾರಂಗ ಮಠದ ಡಾ.ಪ್ರಭುಸಾರಂಗ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭಾಗವಹಿಸಲಿದ್ದಾರೆ. ಇಂದಿನ ಬದುಕಿಗೆ ಭಗವದ್ಗೀತೆಯ ಮಹತ್ವ ಮೊದಲೇ ತಿಳಿದಿದ್ದ ಸ್ವರ್ಣವಲ್ಲೀ ಮಠದ ಶ್ರೀಗಳು ಕಳೆದ 12 ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಅಭಿಯಾನ ಮಾಡಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಅರುಣ ಸೋಲಾಪುರಕರ, ಶ್ರೀಹರಿ ಗೊಳಸಂಗಿ, ಸಂಗನಗೌಡ ಪಾಟೀಲ್, ಪವನ ಕುಲಕರ್ಣಿ, ಅವಿನಾಶ ಬಡಿಗೇರ, ಶ್ರೀರಾಮ ಭಟ್, ವಿನೋದ ಮನೂರ, ವಿಕಾಸ ಪದಕಿ, ವಿಜಯ ಜೋಶಿ ಇತರರು ಉಪಸ್ಥಿತರಿದ್ದರು.
ಕೋಟ್ಪ್ರತಿಬಾರಿ ಒಂದು ಜಿಲ್ಲೆಯಲ್ಲಿ ಒಂದು ಅಧ್ಯಯನ ಪಠಣ ನಡೆಯುತ್ತಿದೆ. ಈ ಬಾರಿ ವಿಜಯಪುರದಲ್ಲಿ ಭಗವದ್ಗೀತೆಯ 9ನೇ ಅಧ್ಯಾಯವನ್ನು ಶ್ರೀಗಳು ಪಠಣ ಮಾಡಲಿದ್ದಾರೆ. ಜಿಲ್ಲೆಯ ಪ್ರತಿ ತಾಲೂಕಿನ ಶಾಲೆಗಳಲ್ಲಿ ಈ ಕುರಿತು ಅರಿವು ಮೂಡಿಸಲಾಗುತ್ತದೆ. ಭಗವದ್ಗೀತೆಯ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ವಿಶೇಷ ಉಪನ್ಯಾಸಗಳು, ವಿಚಾರಗೋಷ್ಠಿಗಳು ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು ಒಂದೂವರೆ ತಿಂಗಳ ಅಭಿಯಾನಕ್ಕೆ ನಿರಂತರವಾಗಿ ಸಮಿತಿ ಕೆಲಸ ಮಾಡಲಿದೆ.
ಅರುಣ ಶಹಾಪುರ, ಭಗವದ್ಗೀತಾ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ-