ಕನ್ನಡಪ್ರಭ ವಾರ್ತೆ ಹಾಸನ
೨೦೨೫ರ ದಸರಾ ನಾಡಹಬ್ಬವು ಯಾವುದೇ ಗೊಂದಲಗಳಿಲ್ಲದೆ, ಶಾಂತಿ- ಸೌಹಾರ್ದತೆಯಿಂದ ನಡೆಯಬೇಕೆನ್ನುವ ಸದುದ್ದೇಶವೇನಾದರೂ ಇದ್ದರೆ ನೀವೊಬ್ಬರು ಕನ್ನಡತಿಯಾಗಿ ದಸರಾ ಉದ್ಘಾಟನೆಯಿಂದ ಹಿಂದೆ ಸರಿದು ತ್ಯಾಗ ಮನೋಭಾವ ತೋರುವುದೇ ನಿಮಗೆ ಗೌರವ ತಂದುಕೊಡುತ್ತದೆ ಎಂದು ರಾಷ್ಟ್ರ ರಕ್ಷಣಾ ಸೇನೆ ರಾಜ್ಯ ಸಂಚಾಲಕ ಸುರೇಶ್ ಗೌಡ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧ ಚರ್ಚೆಗಳು ಪ್ರಾರಂಭಗೊಂಡಿವೆ. ವಿಶೇಷವಾಗಿ ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಮುಷ್ತಾಕ್ ಹೇಳಿದ ಕೆಲವು ವಿಚಾರಗಳು ವಿವಾದಕ್ಕೆ ಕಾರಣವಾಗಿವೆ. ಇದರಿಂದ ನಾಡಹಬ್ಬದ ಸೊಗಸು, ಕಳೆ ಹಾಳಾಗುವ ಭೀತಿ ಇದೆ ಎಂದರು.
ದಸರಾ ಹಬ್ಬವು ಸಾಂಸ್ಕೃತಿಕವಾಗಿದ್ದರೂ, ಚಾಮುಂಡೇಶ್ವರಿ ದೇವಿಯ ಆರಾಧನೆ ಧಾರ್ಮಿಕವಾಗಿ ಮಹತ್ವದ ಹಬ್ಬ. ಇಂತಹ ಸಂದರ್ಭಗಳಲ್ಲಿ ಆಯ್ಕೆಯಾದ ವ್ಯಕ್ತಿ ಸಂಪ್ರದಾಯಗಳನ್ನು ಒಪ್ಪಿಕೊಳ್ಳದಿದ್ದರೆ ಗೊಂದಲಗಳು ಎದುರಾಗುತ್ತವೆ. ಉದ್ಘಾಟನೆ ಅಂದರೆ ಚಾಮುಂಡಿ ಬೆಟ್ಟದ ದರ್ಶನ ಮಾಡಿ, ಅಂಬಾರಿಯಲ್ಲಿರುವ ಚಾಮುಂಡಿ ಮೂರ್ತಿಗೆ ಶಾಸ್ತ್ರೋಕ್ತ ಪೂಜೆ ಸಲ್ಲಿಸಿ, ಆರತಿ ಮಾಡಿ ಉದ್ಘಾಟನೆ ಮಾಡುವುದು. ಈ ಸಂಪ್ರದಾಯಕ್ಕೆ ಸಹಕರಿಸದ ಸ್ಥಿತಿ ಬಂದರೆ ಸಮಸ್ಯೆ ಉಂಟಾಗುವುದು ಖಚಿತ ಎಂದು ಅಭಿಪ್ರಾಯಪಟ್ಟರು.ನೀವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ. ಬೂಕರ್ ಪ್ರಶಸ್ತಿ ಪಡೆದಿರುವುದು ಹೆಮ್ಮೆ. ಆದರೆ ದಸರಾ ಉದ್ಘಾಟನೆಯಂತಹ ಧಾರ್ಮಿಕ- ಸಾಂಸ್ಕೃತಿಕ ಹಬ್ಬಕ್ಕಿಂತ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅಥವಾ ಇತರೆ ಗೌರವಗಳಿಗೆ ನೀವು ಸೂಕ್ತ. ಅದರಿಂದ ನಿಮಗೆ ಇನ್ನಷ್ಟು ಮರ್ಯಾದೆ ಸಿಗುತ್ತದೆ ಎಂದು ಸಲಹೆ ನೀಡಿದರು.
ಸಮಾಜದೊಳಗೆ ಪರ- ವಿರೋಧ ಸಂಘರ್ಷ ತೀವ್ರಗೊಳ್ಳುತ್ತಿರುವ ಈ ಸಮಯದಲ್ಲಿ, ನೀವು ಸ್ವಯಂ ಹಿಂದೆ ಸರಿದು, ಕನ್ನಡ ತಾಯಿ ಮತ್ತು ನಾಡಿಗೆ ಗೌರವ ತೋರಿಸಿದರೆ, ಅದರಿಂದ ನಿಮ್ಮ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗುತ್ತದೆ. ಹಬ್ಬದ ಸಡಗರ ಕಳೆ ತಪ್ಪದೇ, ದೇಶ- ವಿದೇಶಗಳಿಂದ ಬರುವ ಅತಿಥಿಗಳಿಗೆ ನಮ್ಮ ಸಂಸ್ಕೃತಿ ಪರಿಚಯವಾಗುವಂತಾಗಲಿ ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರ ರಕ್ಷಣಾ ಸೇನೆ ಜಿಲ್ಲಾ ಸಂಚಾಲಕ ರಾಜೇಶ್ ಕೆಂಡನಹಳ್ಳಿ, ಧರ್ಮನಾಯಕ್, ಪವನ್ ಇತರರು ಇದ್ದರು.