ಮರಿಯಮ್ಮನಹಳ್ಳಿ: ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮದ ಸಿಂಧೂರ ಬಂಡಾರ ವಿಶೇಷ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಸ್ಥಳೀಯ ಪಪಂನಿಂದ ಆರಂಭವಾಗಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಬೃಹತ್ ವೇದಿಕೆಗೆ ಸಾಗಿದ ತಾಯಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆ ಶುಕ್ರವಾರ ಸಂಜೆ ಮರಿಯಮ್ಮನಹಳ್ಳಿಯಲ್ಲಿ ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿಸಿತು.
ತಾಯಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆಯ ಮುಂಭಾಗದಲ್ಲಿ ಲೋಕಪ್ಪನಹೊಲದ ಕಹಳೆ ವಾದನ ಕಲಾವಿದರ ಕಹಳೆ ವಾದನವು ಸಿಂಧೂರ ಬಂಡಾರ ಕಾರ್ಯಕ್ರಮಕ್ಕೆ ಶುಭ ಕೋರಿದಂತಿತ್ತು. ಶೋಭಾಯಾತ್ರೆಯಲ್ಲಿ ಶಾಸಕ ಕೆ. ನೇಮರಾಜ್ ನಾಯ್ಕ ಸಾಂಪ್ರದಾಯಿಕ ಶೈಲಿಯ ಉಡುಪು ಧರಿಸಿ ಕರ್ನಾಟಕ ರಾಜ್ಯೋತ್ಸವದ ಸಿಂಧೂರ ಬಂಡಾರ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಿರುವುದು ವಿಶೇಷವಾಗಿತ್ತು.
ಹಸಿರು ಸೀರೆಯನ್ನುಟ್ಟುಕೊಂಡ ಗರಗ ಗ್ರಾಮದ ಬಾಲಕಿಯರು ಕೋಲಾಟ, ಕೊಟ್ಟೂರು ತಾಲೂಕಿನ ಚಪ್ಪರದಳ್ಳಿಯ ನಂದಿಕೋಲು, ನಂದಿಧ್ವಜ, ಸಮಳ ಮೇಳ, ದಾವಣಗೇರಿಯ ನಾಸಿಕ್ ಡೋಲು, ಚಿತ್ರದುರ್ಗದ ದೊಡ್ಡಜೆಲ್ಲೂರಿನ ಬೈಲಾಂಜನೇಯಸ್ವಾಮಿ ಜಾನಪದ ಕಲಾ ತಂಡದಲ್ಲಿ ವೀರಾಂಜಿನೇಯಮೂರ್ತಿ ವೇಷದಾರಿ, ಉಗ್ರನರಸಿಂಹ ವೇಷ, ಮಹಿಷಿ ವೇಷ, ಯಕ್ಷಗಾನದ ಪಾತ್ರಧಾರಿಗಳ ಕಲಾವಿದರ ವೇಷಧಾರಿ, ಮಂಗಳೂರಿನ ಹುಲಿಕುಣಿತ, ಹಂಪಾಪಟ್ಟಣದ ಆನೆಕಲ್ಲುನ ಸುಡುಗಾಡು ಸಿದ್ದರು, ಚಿಕ್ಕಮಂಗಳೂರಿನ ಹಡಗಲು ಗ್ರಾಮದ ಡೊಳ್ಳುಕುಣಿತ, ಹಗರಿಬೊಮ್ಮನಹಳ್ಳಿಯ ಹಗಲುವೇಷರ ವೇಷಗಳು ವೀಕ್ಷಕರ ಕಣ್ಮನ ಸೆಳೆಯಿತು.ಕಲಾತಂಡಗಳು ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದವು. ಶೋಭಾಯಾತ್ರೆಯು ನೋಡುಗರನ್ನು ವರ್ತಮಾನದಿಂದ ಇತಿಹಾಸಕ್ಕೆ ಎಳೆದೊಯ್ಯುಂತೆ ಭಾಸವಾಯಿತು.
ಎಲ್ಲ ಕಲಾತಂಡಗಳು ಅದ್ಭತ ಪ್ರದರ್ಶನ ನೀಡಿದರು. ಮೆರವಣಿಗೆಯನ್ನು ಸ್ಮರಣೀಯವಾಗಿಸಿಕೊಳ್ಳಲು ಕೆಲವರು ತಮ್ಮ ಮೊಬೈಲ್‌ಗಳಿಂದ ವಿಡಿಯೋ ಮತ್ತು ಭಾವಚಿತ್ರಗಳನ್ನು ಕಿಕ್ಕಿಸಿಕೊಳ್ಲುತ್ತಿದ್ದರೆ, ಇನ್ನು ಕೆಲವರು ಮೆರಣಿಗೆಯಲ್ಲಿ ತಾವೂ ಸಾಗುತ್ತಾ ವೀಡಿಯೋ ದೃಷ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದು ಕಂಡು ಬಂದಿತು. ಅನೇಕ ಕಲಾತಂಡಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟುಕೊಳ್ಳತ್ತಿದ್ದರು.