ರಾಮನಗರ: ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಫಲವತ್ತಾದ ಕೃಷಿ ಭೂಮಿಯನ್ನು ವಶ ಪಡಿಸಿಕೊಳ್ಳುತ್ತಿದೆ. ಈ ಯೋಜನೆ ಮೂಲಕ 33 ಸಾವಿರ ಕೋಟಿ ಲಾಭ ಮಾಡಲು ಸರ್ಕಾರ ಹೊರಟಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಆರ್ಥಿಕ ಇಲಾಖೆ ಇದಕ್ಕೆ ಒಪ್ಪಿಗೆ ನೀಡದಿದ್ದರೂ ಯೋಜನೆ ಮುಂದುವರೆಸುತ್ತಿದ್ದೀರಿ. ಈ ಯೋಜನೆ ಸರ್ಕಾರಕ್ಕೆ ಹೊರೆ ಅಂತ ಅಧಿಕಾರಿಗಳೇ ಹೇಳುತ್ತಿದ್ದಾರೆ. ಹುಡ್ಕೊದಿಂದ ಸಾಲ ಪಡೆಯಲು ನಿಮ್ಮ ಜಮೀನುಗಳನ್ನೇ ಅಡ ಇಡಬೇಕು. ಸರ್ಕಾರ 33 ಕೋಟಿ ಲಾಭ ಮಾಡಲು ರೈತರ ಭೂಮಿ ಬೇಕಾ ಎಂದು ವಾಗ್ದಾಳಿ ನಡೆಸಿದರು.
ರೈತರ ಹೆಸರಲ್ಲಿ 1 ಸಾವಿರ ಕೋಟಿ ಲಾಭ ಮಾಡಿದರೂ ಅಚ್ಚರಿ ಇಲ್ಲ. ಯಾರ ಉದ್ದಾರಕ್ಕಾಗಿ ಈ ಯೋಜನೆ ಮಾಡುತ್ತಿದ್ದೀರಿ. ದುಡ್ಡೇ ಇಲ್ಲದೇ ಯೋಜನೆ ಮಾಡುವ ಅವಶ್ಯಕತೆ ಇದೆಯಾ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.ಸರ್ಕಾರಕ್ಕೆ ಕಣ್ಣು ಕಾಣ್ತಿಲ್ಲ, ಕಿವಿ ಕೇಳ್ತಿಲ್ಲ:
ಬಿಡದಿಯ ವಡೇರಹಳ್ಳಿ, ಮಂಡಲಹಳ್ಳಿ, ಕೆಂಪಯ್ಯನಪಾಳ್ಯ ಗ್ರಾಮಗಳನ್ನ ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿರೋ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕು. ಈ ಭಾಗದಲ್ಲಿ 1 ಎಕರೆ ಭೂಮಿ ಹೊಂದಿರುವ ರೈತರೇ ಹೆಚ್ಚಾಗಿದ್ದಾರೆ. ಶೇ 80ರಷ್ಟು ಜನ ಗರಿಷ್ಠ 1 ಎಕರೆ ಭೂಮಿ ಹೊಂದಿದ್ದಾರೆ. ಕೆಂಪಯ್ಯನಪಾಳ್ಯದಲ್ಲಿ 354 ಎಕರೆ ನೋಟಿಫಿಕೇಷನ್ ಆಗಿದೆ. ಈ ಭಾಗದ 600 ರೈತರಲ್ಲಿ 500 ಜನ ರೈತರು 1 ಎಕರೆಗಿಂತ ಕಮ್ಮಿ ಜಮೀನು ಹೊಂದಿದ್ದಾರೆ ಎಂದು ತಿಳಿಸಿದರು.
ಕನಕಪುರದಲ್ಲಿ ತಮ್ಮ ಕ್ಷೇತ್ರದ ರೈತರಿಗೆ ಜಮೀನು ಮಾರಬೇಡಿ, ಮುಂದೆ ಒಳ್ಳೆಯ ಬೆಲೆ ಸಿಗುತ್ತದೆ ಎನ್ನುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಡದಿಯ ಬಡ ರೈತರ ಭೂಮಿಯನ್ನು ಬಲವಂತವಾಗಿ ಕಸಿಯಲು ಹೊರಟಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಬುದ್ದಿವಂತರ ರೀತಿ ಅಧಿಸೂಚನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಡಿಸಿಎಂನಿಂದ ಸಿಎಂ ಆಗಿದ್ದಾರೆ. ನಮ್ಮ ಜಿಲ್ಲೆಯವರು ಅನ್ನೋ ಕಾರಣಕ್ಕೆ ನಾವೂ ಅಭಿನಂದನೆ ಸಲ್ಲಿಸಿದ್ದೇವೆ. ಆದರೆ ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡೋದು ಯಾಕೆ? ಇದಕ್ಕೆ ನಾವು ಬಿಡಲ್ಲ. ಜೂನ್ 21ರಂದು ಬೃಹತ್ ಪಾದಾಯಾತ್ರೆ ಮೂಲಕ ಹೋರಾಟ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ.
14ಕೆಆರ್ ಎಂಎನ್ 1.ಜೆಪಿಜಿ