ಕನ್ನಡಪ್ರಭ ವಾರ್ತೆ ರಾಯಚೂರು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಬಗ್ಗೆ ಏಮ್ಸ್ ಹೋರಾಟ ಸಮಿತಿ ಪದಾಧಿಕಾರಿಗಳು ಅಸಾಂವಿಧಾನಿಕ ಪದ ಬಳಸಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಸಮಿತಿಯಿಂದ ಬುಧವಾರ ಬೈಕ್ ರ್ಯಾಲಿ ಮಾಡಲಾಯಿತು.ಇಲ್ಲಿನ ಶಾಸಕರ ಕಚೇರಿಯಿಂದ ಆರಂಭಗೊಂಡ ರ್ಯಾಲಿ ಜಿಲ್ಲಾಡಳಿತ ಹೊಸ ಭವನಕ್ಕೆ ಬಂದು ತಲುಪಿತು ನಂತರ ಜಿಲ್ಲಾಧಿಕಾರಿ ನಿತೀಶ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ರ್ಯಾಲಿ ಪೂರ್ವದಲ್ಲಿ ಶಾಸಕರ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್ ಅವರು,
ಏಮ್ಸ್ ಹೋರಾಟಗಾರರಾದ ಬಸವರಾಜ ಕಳಸ, ಅಶೋಕ ಕುಮಾರ ಸಿ.ಕೆ ಜೈನ್, ಎಸ್.ಮಾರೆಪ್ಪ ಸೇರಿ ಹಲವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ನನ್ನ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದು, ತಕ್ಷಣ ಕ್ಷಮೆ ಕೇಳಬೇಕು, ಪೋಲಿಸರು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಅನಾಹುತಗಳಿಗೆ ನಾನು ಜವಾಬ್ದಾರನಲ್ಲ ಎಚ್ಚರಿಕೆ ನೀಡಿದರು.ಬಾಯಿಗೆ ಬಂದಂತೆ ಮಾತನಾಡುವ ಮುಖಂಡ ಬಸವರಾಜ ಕಳಸ ಅವರು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ, ಅಶೋಕ ಜೈನ್ ನಾಲಿಗೆ ಹರಿದುಬಿಟ್ಟು ಮಾತನಾಡಿದ್ದು ನಮಗೂ ಕೀಳುಮಟ್ಟಕ್ಕಿಳಿದು ಮಾತನಾಡಲು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಮ್ಸ್ ಗಾಗಿ ಜಿಲ್ಲೆಯ ಎಲ್ಲ 7 ಜನ ಶಾಸಕರು, ಸಂಸದರು ರಾಜೀನಾಮೆ ನೀಡಿ ಧರಣಿಗೆ ಕುಳಿತುಕೊಳ್ಳಲಿ ದಮ್ಮಿದ್ದರೆ ರಾಜೀನಾಮೆ ನೀಡಲಿನ ನಾನು ಸಹ ಅದಕ್ಕೆ ಸಿದ್ದರಿದ್ದು, ನಾವೆಲ್ಲರೂ ಕುಳಿತುಕೊಂಡರೇ ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮ ಬಳಿಗೆ ಬರುತ್ತಾರೆ ಎಂದು ಶಾಸಕರು ಗುಡುಗಿದರು.ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುಖಂಡರಾದ ಎನ್.ಶಂಕ್ರಪ್ಪ,ರವಿಂದ್ರ ಜಲ್ದಾರ್, ಆಂಜನೇಯ ಕಡಗೋಲ್, ಪಿ.ಯಲ್ಲಪ್ಪ, ಈ.ಶಶಿರಾಜ, ಎನ್.ಕೆ.ನಾಗರಾಜ, ರಾಘವೇಂದ್ರ ಊಟ್ಟೂರು, ಶಂಶಾಲಂ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಏಮ್ಸ್ ಹೋರಾಟಗಾರರ ವಿರುದ್ಧ ಕೇಸ್ರಾಯಚೂರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದಡಿ ಏಮ್ಸ್ ಹೋರಾಟಗಾರರ ವಿರುದ್ಧ ನಗರದ ಪಶ್ವಿಮ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಏಮ್ಸ್ ಹೋರಾಟಗಾರರಾದ ಅಶೋಕ ಕುಮಾರ ಜೈನ್, ಬಸವರಾಜ ಕಳಸ, ಎಸ್.ಮಾರೆಪ್ಪ, ಶ್ರೀನಿವಾಸ, ಎಂ.ಆರ್.ಬೇರಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಏಮ್ಸ್ ಮಂಜೂರಾತಿ ಕುರಿತಾಗಿ ನಿರ್ಲಕ್ಷ್ಯದ ಮಾತುಗಳನ್ನಾಡಿದ್ದಾರೆ, ಆ ಸಮಯದಲ್ಲಿಯೇ ಪಕ್ಕದಲ್ಲಿರುವ ಶಾಸಕರು ಸಹ ಮೌನ ವಹಿಸುವುದರ ಮುಖಾಂತರ ಬೇಜವಾಬ್ದಾರಿ ತೋರಿದ್ದಾರೆ ಎಂದು ಏಮ್ಸ್ ಹೋರಾಟಗಾರರು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರು ಎಲ್ಲೆ ಸಿಕ್ಕರೂ ಕಲ್ಲಿನಿಂದ, ಬಾರಿಗೆಯಿಂದ, ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಇವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತದೆತಕ್ಷಣಕ್ಕೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ದೂರನ್ನು ನೀಡಿದ್ದರು. ದೂರಿನಾನ್ವಯ ಕಲಂ 352, 351(2)(3) ಪ್ರಕಾರ ಪೊಲೀಸರು ಸಂಜೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.