ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಪ್ರಮುಖ ರಸ್ತೆಯಾಗಿರುವ ಡಾ.ರಾಜ್‌ಕುಮಾರ್ ರಸ್ತೆಯ (ಬಿ.ಎಚ್.ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು, ಸಿಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು.ರಾಜ್ಯಾದ್ಯಂತ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿಯನ್ನು ಸಹ ಸರಿಯಾಗಿ ನೀಡದೆ, ಯಾವುದೇ ಅಭಿವೃದ್ಧಿ ಕಾರ್ಯವನ್ನು ಸಹ ಕೈಗೊಳ್ಳದೆ ಜನರ ಜನರ ಹಿತಕಾಪಾಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಈ ನಡುವೆ ಪ್ರತಿಭಟನಾ ಸ್ಥಳದಲ್ಲಿಯೇ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಕರೆ ಮಾಡಿ ಚರ್ಚಿಸಲಾಯಿತು. ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಿಂದ ಕೆಲ ನಿಮಿಷ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನೆಗೂ ಮೊದಲು ಸರ್.ಎಂ.ವಿಶ್ವೇಶ್ವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಹಿರಿಯ ಕಾರ್ಯಕರ್ತರಾದ ಎನ್ ವಿಶ್ವನಾಥರಾವ್, ಉಕ್ಕುಂದ ಶಾಂತಣ್ಣ, ಸಿದ್ದಾಪುರ ಪರಮೇಶಣ್ಣ, ಕರುಣಾಕರ್, ರಾಘವೇಂದ್ರ, ಸುಬ್ರಮಣಿ, ಎಂ.ಎಸ್ ಸುರೇಶಪ್ಪ, ಸಿದ್ದಾಪುರ ನಂಜಪ್ಪ, ಸುಲೋಚನ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಬಿ.ಎಸ್ ಶ್ರೀನಾಥ್, ಧನುಷ್ ಬೋಸ್ಲೆ, ಅನ್ನಪೂರ್ಣ, ರೇಖಾ ಪದ್ಮಾವತಿ, ಶಕುಂತಲ, ಪ್ರೇಮ ಸೇರಿದಂತೆ ಮಂಡಲ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು, ಹಿರಿಯ ಮುಖಂಡರು, ವಿವಿಧ ಮೋರ್ಚಗಳ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು.