ಶ್ರೀಕಾಂತ್‌ ಹೆಸರಲ್ಲಿ ಬಿಜೆಪಿ ರಾಜಕೀಯ: ಗುಂಡೂರಾವ್‌

KannadaprabhaNewsNetwork |  
Published : Jan 07, 2024, 01:30 AM IST
ದಿನೇಶ | Kannada Prabha

ಸಾರಾಂಶ

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ದಿನೇಶ ಗುಂಡೂರಾವ್‌ ಅವರು, ಶ್ರೀಕಾಂತ ಪೂಜಾರಿ ಹೆಸರಲ್ಲಿ ಸುಮ್ಮನೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದರೆ, ಆತ ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಶ್ರೀಕಾಂತ್‌ ಪೂಜಾರಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದೆಲ್ಲ ಲೋಕಸಭೆ ಚುನಾವಣೆಗಾಗಿ ಮಾಡುತ್ತಿರುವ ರಾಜಕೀಯ ಅಷ್ಟೇ. ನಮಗೆ ಶ್ರೀಕಾಂತ್‌ ಪೂಜಾರಿ ಯಾರು ಎಂಬುದೇ ಗೊತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ಇದೇ ವೇಳೆ ಹಿಂದೂತ್ವ ಯಾರ ಪಕ್ಷದ ಸ್ವತ್ತಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಕಾಂತ ಪೂಜಾರಿ ಹೆಸರಲ್ಲಿ ಸುಮ್ಮನೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದರೆ, ಆತ ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದರು.

ಕೇಂದ್ರದಿಂದ ಬರಬೇಕಿರುವ ಜಿಎಸ್‌ಟಿ ಹಣಕ್ಕಾಗಿ ಹೋರಾಟ ಮಾಡಬೇಕು. ಒಂದು ರೂಪಾಯಿ ಹಣ ಬಂದಿಲ್ಲ. ಮೋದಿ ಸರ್ಕಾರದಿಂದ ನಮಗೆ ಅನ್ಯಾಯ ಆಗಿದೆ. ಇದಕ್ಕಾಗಿ ಬಿಜೆಪಿ ಹೋರಾಟ ಮಾಡಿದರೆ ರಾಜ್ಯಕ್ಕೆ ದುಡ್ಡು ಬಂದು ಜನತೆಗೆ ಅನುಕೂಲವಾದರೂ ಆಗಬಹುದು ಎಂದರು.

ಶ್ರೀಕಾಂತ್ ಪೂಜಾರಿ ರೌಡಿಶೀಟರ್, ಆತನ ಮೇಲಿರುವ ರೌಡಿಶೀಟರ್ ಪಟ್ಟಕ್ಕೆ ಮುಕ್ತಿ ಕೊಟ್ಟಿರುವುದೇ ಕಾಂಗ್ರೆಸ್‌. ಆದರೆ, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅದನ್ನೇ ದೊಡ್ಡದು ಮಾಡಿಕೊಂಡು ಬಿಜೆಪಿ ಹೋರಾಟ ಮಾಡುತ್ತಿದೆ ಅಷ್ಟೇ ಎಂದರು.

ರಾಮಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ಸಂಗತಿ. ಪ್ರತಿ ಗ್ರಾಮದಲ್ಲಿ ರಾಮ ಮಂದಿರ ಇವೆ. ಹಿಂದೂತ್ವ ಒಬ್ಬರ ಆಸ್ತಿ ಅಲ್ಲ. ಹಿಂದೂತ್ವಕ್ಕೆ ತನ್ನದೇ ಆದ ಇತಿಹಾಸ ಇದೆ. ಹಿಂದೂತ್ವ ಯಾವ ಪಕ್ಷದ ಆಸ್ತಿಯೂ ಅಲ್ಲ ಎಂದರು.

ಎಂಪಿ ಟಿಕೆಟ್ ಸಚಿವ ಸಂತೋಷ ಲಾಡ್‌ಗೆ ಕೊಡಲಾಗುತ್ತಿದೆಯಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಬಗ್ಗೆ ಸುರ್ಜೆವಾಲಾ ಬಂದು ಚರ್ಚೆ ಮಾಡುತ್ತಾರೆ. ಯಾರಿಗೆ ಟಿಕೆಟ್‌ ಕೊಡಬೇಕೆನ್ನುವುದನ್ನು ಆಮೇಲೆ ತೀರ್ಮಾನವಾಗುತ್ತದೆ ಎಂದರು.

ಕೋವಿಡ್ ಆತಂಕ‌ ಬೇಡ

ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಆದರೆ ಜನ‌ ಆತಂಕ‌ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸಹಜವಾಗಿ ಸ್ವಲ್ಪ ಕೇಸ್ ಜಾಸ್ತಿ ಆಗಿವೆ. ಸುಮಾರು 7 ಸಾವಿರ ಟೆಸ್ಟಿಂಗ್ ಮಾಡಲಾಗಿದೆ. ಜನ ಆತಂಕ ಪಡುವ ಅಗತ್ಯವಿಲ್ಲ. ಸ್ವಲ್ಪ ವಯಸ್ಸಾದವರು, ಬೇರೆ ಬೇರೆ ಆರೋಗ್ಯ ಸಮಸ್ಯೆ ಇದ್ದವರು ಎಚ್ಚರದಿಂದ ಇರಬೇಕು ಎಂದರು

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ