ಮುಂಡಗೋಡ:
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳುತ್ತಿರುವ ಹಿನ್ನೆಲೆ ಮುಂಡಗೋಡ ತಾಲೂಕಿನಲ್ಲಿ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿ ಮನೆ-ಮನೆಗೂ ಶ್ರೀರಾಮನ ಚಿತ್ರಪಟ, ಆಮಂತ್ರಣ ಪತ್ರಿಕೆ, ಮಂತ್ರಾಕ್ಷತೆ ತಲುಪಿಸುವ ಕಾರ್ಯ ಬರದಿಂದ ಸಾಗಿದೆ.ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗ ದಳ, ಶ್ರೀರಾಮಸೇನೆ, ನಮೋ ಬ್ರಿಗೇಡ್ ಸೇರಿದಂತೆ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರು ಮನೆ-ಮನೆಗೆ ಮಂತ್ರಾಕ್ಷತೆ ತಲುಪಿಸುವ ಜವಾಬ್ದಾರಿಯನ್ನು ಆಯಾ ಊರಿನ ಮುಖಂಡರು, ಯುವಪಡೆಗೆ ವಹಿಸಿದ್ದಾರೆ. ಒಂದೊಂದು ಸಂಘಟನೆಯ ಕಾರ್ಯಕರ್ತರು ೩-೪ ಪಂಚಾಯಿತಿಯ ಜವಾಬ್ದಾರಿ ತೆಗೆದುಕೊಂಡಿದ್ದು, ಶ್ರೀರಾಮನ ಭಾವಚಿತ್ರದೊಂದಿಗೆ ಆಯಾ ಊರಿಗೆ ತೆರಳಿ ಮನೆ-ಮನೆಗೆ ಮಂತ್ರಾಕ್ಷತೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.ಸಭೆ ನಡೆಸುವ ಮೂಲಕ ಮಂತ್ರಾಕ್ಷತೆ ಹಾಗೂ ರಾಮಮಂದಿರ ನಿರ್ಮಾಣದ ಮಾಹಿತಿಯುಳ್ಳ ಕರಪತ್ರ ನೀಡುತ್ತಿದ್ದಾರೆ. ಜವಾಬ್ದಾರಿ ತೆಗೆದುಕೊಳ್ಳುವ ಮುಖಂಡರು ತಮ್ಮ ಊರಿನ ಪ್ರತಿ ಮನೆ-ಮನೆಗೆ ಮಂತ್ರಾಕ್ಷತೆ ತಲುಪಿಸಬೇಕು ಹಾಗೂ ಜ. ೨೨ರಂದು ಸ್ಥಳೀಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ.ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಓಡಾಟ ಜೋರಾಗಿದೆ. ಮಂತ್ರಾಕ್ಷತೆ ಹಾಗೂ ಶ್ರೀರಾಮನ ಚಿತ್ರಪಟ ನೀಡಿ, ಅಯೋಧ್ಯಾ ಮಂದಿರ ಉದ್ಘಾಟನೆಯ ದಿನವನ್ನು ದೀಪಾವಳಿ ರೀತಿಯಲ್ಲಿ ಆಚರಿಸುವಂತೆ ಮನವಿ ಮಾಡಲಾಗುತ್ತಿದೆ. ಆ ದಿನದಂದು ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದು, ಮನೆಯ ಮುಂದೆ ರಂಗೋಲಿ ಹಾಕಿ, ತಳಿರು-ತೋರಣಗಳಿಂದ ಸಿಂಗರಿಸುವುದು, ಸಂಜೆ ದೀಪ ಬೆಳಗಿಸುವುದು ಸೇರಿದಂತೆ ಗ್ರಾಮಸ್ಥರು ಒಂದುಗೂಡಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುವಂತೆ ಹೇಳಲಾಗುತ್ತಿದೆ.ಹಿಂದೂ ಜಾಗರಣ ವೇದಿಕೆ ಸಂಚಾಲಕ ಪ್ರಕಾಶ ಬಡಿಗೇರ, ಬಜರಂಗ ದಳ ಸಂಚಾಲಕ ಶಂಕರ ಲಮಾಣಿ, ಶ್ರೀರಾಮ ಸೇನೆಯ ಅಯ್ಯಪ್ಪ ಭಜಂತ್ರಿ, ಮಂಜುನಾಥ ಹರಿಜನ, ತಂಗಮ್ ಚಿನ್ನನ್, ವಿಶ್ವನಾಥ ನಾಯರ, ಮಲ್ಲಿಕಾರ್ಜುನ ಗೌಳಿ ಸೇರಿದಂತೆ ನೂರಾರು ಹಿಂದು ಸಂಘಟನೆ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.