ಬಳ್ಳಾರಿ: ರಾಜ್ಯದ ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ಪಕ್ಷದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕಳೆದ ಬಜೆಟ್ ನಲ್ಲಿ ಬಿಡುಗಡೆಯಾಗಿದ್ದ ಪ್ರೋತ್ಸಾಹ ಧನವನ್ನು ಪಶುಪಾಲನಾ ಇಲಾಖೆಯ ಖರ್ಚು ವೆಚ್ಚಗಳಿಗೆ ಬಳಕೆಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು. ಬಾಕಿ ಉಳಿದಿರುವ ಎಂಟು ತಿಂಗಳ ಹಣವನ್ನು ಬಿಡುಗಡೆಗೊಳಿಸದ ಸರ್ಕಾರ ಧೋರಣೆ ಬಗ್ಗೆ ಹಾಲು ಉತ್ಪಾದಕರಿಗೆ ಗೊಂದಲವಿದ್ದು, ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಜನರು ಮತನೀಡಿ ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್‌ನವರು ಬೆಲೆ ಏರಿಕೆ ಬಳುವಳಿ ನೀಡಿದ್ದಾರೆ. ಪ್ರತಿ ಹಂತದಲ್ಲೂ ಬೆಲೆಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡದ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿ, ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದೆ ಎಂದರು.ಜಿಲ್ಲಾಧಿಕಾರಿ ಕಚೇರಿಗೆ ಹಸುಗಳೊಂದಿಗೆ ಆಗಮಿಸಿದ ಪ್ರತಿಭಟನಾಕಾರರು, ಹಸುಗಳ ಹಾಲು ಕರೆದು ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡೇದ್ ಸುರೇಶ್, ಕೆ.ಎ.ರಾಮಲಿಂಗಪ್ಪ, ಮಾಜಿ ಮೇಯರ್ ವೆಂಕಟರಮಣ, ಪಕ್ಷದ ಮುಖಂಖಡರಾದ ಕೆ.ಎಸ್.ದಿವಕಾರ್, ಮಲ್ಲಿಕಾರ್ಜುನಗೌಡ, ವೆಂಕಟೇಶ್ವರ, ವಿ.ಎಸ್.ಶಂಕರ್, ರಾಮಚಂದ್ರಯ್ಯ, ಶ್ರೀನಿವಾಸ ಪಾಟೀಲ್, ನಾಗರಾಜರೆಡ್ಡಿ, ಸುಗುಣ, ಉಜ್ವಲ, ಭಾಗ್ಯಮ್ಮ, ವಿಜಯಲಕ್ಷ್ಮಿ, ಶಿವರುದ್ರಗೌಡ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.