ಕನ್ನಡಪ್ರಭ ವಾರ್ತೆ ಕಲಬುರಗಿ
ಏಕೆಂದರೆ ಕಳೆದ ಅಸೆಂಬ್ಲಿ ಚುನಾವಣೆ ನಂತರ ಕಲಬುರಗಿಯಲ್ಲಿ ಬಿಜೆಪಿ ಮಕಾಡೆ ಮಲಗುವ ಮೂಲಕ ಮೌನವಾಗಿತ್ತು. ಅದೆಷ್ಟು ಕಮಲ ಇಲ್ಲಿ ಬಾಡಿದೆ ಎಂದರೆ ಜನಪರ ಹಲವು ವಿಷಯಗಳು, ಜ್ವಲಂತ ಸಮಸ್ಯೆಗಳು ಕಲಬುರಗಿಯನ್ನು ತಿಕ್ಕಿ ಮುಕ್ಕುತ್ತಿದ್ದರೂ ಕಮಲ ಪಡೆ ಅಂತಹ ಸಮಸ್ಯೆಗಳನ್ನು ಎತ್ತಿಕೊಂಡು ಬಂದು ಹೋರಾಟಗಳನ್ನು ರೂಪಿಸೋದಾಗಲಿ, ಆ ಮೂಲಕ ಮರು ಎಂಟ್ರಿ ಪಡೆಯಾದಗಲಿ ಯಾವುದನ್ನೂ ಮಾಡುವ ಗೋಜಿಗೂ ಹೋಗಿರಲಿಲ್ಲ.
ಈಚೆಗಷ್ಟೇ ಕಲಬುರಗಿ ಗ್ರಾಮೀಣ ಹಾಗೂ ನಗರ ಬಿಜೆಪಿ ಅಧ್ಯಕ್ಷಗಿರಿ ಅಂತಿಮಗೊಂಡಿದ್ದರಿಂದ ಇದೀಗ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ದಿಗ್ವಿಜಯವೂ ಇಲ್ಲಿಗೆ ನಿಗದಿಯಾಗಿರೋದರಿಂದ ಬಿಜೆಪಿಯಲ್ಲಿ ಇನ್ನಾದರೂ ಮೊದಲಿನ ಉತ್ಸಾಹ ಕಂಡು ಬರುವುದೆ? ವಿಜೇಂದ್ರ ಭೇಟಿ ಪಕ್ಷ ಸಂಘಟೆನೆಗೆ ಟಾನಿಕ್ ಆಗುವುದೆ? ಎಂದು ಕಮಲ ಪಾಳಯದ ಕಾರ್ಯಕರ್ತರೇ ಚರ್ಚಿಸುತ್ತ ಹೊಸತನದ ನಿರೀಕ್ಷೆಯಲ್ಲಿದ್ದಾರೆ.ಜ.29ರಂದು ಸೋಮವಾರ ನಡೆಯಲಿರುವ ಬಿಜೆಪಿ ಪದಗ್ರಹಣ ಹಾಗೂ ಬಿಜೆಪಿ ಪಕ್ಷದ ಈ ಮಹತ್ವದ ಸಂಘಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾಲ್ಗೊಳ್ಳುತ್ತಿದ್ದಾರೆ.
ನೂತನ ಅಧ್ಯಕ್ಷರುಗಳ ಪದಗ್ರಹಗಹಣ ಸಮಾರಂಭದ ನಂತರ ಇದೇ ವೇದಿಕೆಯಲ್ಲಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರ ಅಭಿನಂದನಾ ಸಮಾರಂಭ ಸಹ ನಡೆಯಲಿದೆ. ಈ ಸಮಾರಂಭದಲ್ಲಿ 10 ರಿಂದ 20 ಸಾವಿರ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ.
ನೂತನ ಅಧ್ಯಕ್ಷರಲ್ಲಿ ನಗರಾಧ್ಯಕ್ಷ ಪದಕ್ಕೆ ಹೊಸಮುಖ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಳೆ ಮುಖ ಶಿವರಾಜ ಪಾಟೀಲ್ ರದ್ದೇವಾಡಗಿಗೆ ಪಕ್ಷ ಮಣೆ ಹಾಕಿದೆ. ಇವರ ಸಂಘಟನಾ ಚತುರತೆ ನಗರ ಹಾಗೂ ಜಿಲ್ಲೆಯಲ್ಲಿ ಅದ್ಹೇಗೆ ಕೈ ಪಡೆಯನ್ನು ಟಕ್ಕರ್ ತೆಗೆದುಕೊಳ್ಳುವುದೋ ಕಾದು ನೋಡಲಾಗುತ್ತಿದೆ.