ಕಂಪ್ಲಿ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಸೇರಿದಂತೆ ರಾಜ್ಯದ ನಾಲ್ಕು ವಿಧಾನ ಪರಿಷತ್ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಬ್ಯಾಲಟ್ ಪೇಪರ್‌ನಲ್ಲೂ ಬಿಜೆಪಿಗೆ ಗೆಲುವು: ಚುನಾವಣೆಗಳಲ್ಲಿ ಸೋಲು ಕಂಡಾಗಲೆಲ್ಲ ಕಾಂಗ್ರೆಸ್ ಪಕ್ಷವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಆಧಾರರಹಿತ ಆರೋಪ ಮಾಡುತ್ತಾ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿತ್ತು. ಆದರೆ ಈ ಬಾರಿ ಬ್ಯಾಲಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ ಎಂದು ಟೀಕಿಸಿದರು.
ಚುನಾವಣೆಯ ಫಲಿತಾಂಶವು ಬಿಜೆಪಿ ಪರವಾಗಿ ಜನರ ಒಲವು ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಹೇಳಿದರು.ಕಾಲುವೆಗೆ ನೀರು ಹರಿಸದಿದ್ದರೆ ಹೋರಾಟ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಮೇಲ್ಮಟ್ಟದ ಕಾಲುವೆ ವ್ಯಾಪ್ತಿಯ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವುದು ಅಗತ್ಯವಾಗಿದೆ. ಡಿ. 15ರವರೆಗೆ ಕಾಲುವೆಗಳಿಗೆ ನೀರು ಹರಿಸದಿದ್ದರೆ ರೈತರ ಪರವಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಿವಿಧ ಮೋರ್ಚಾಗಳ ಪ್ರಮುಖರಾದ ಜಿ.ಜಿ. ಚಂದ್ರಣ್ಣ, ಟಿ.ರಬಿಯಾ ನಿಸಾರ್, ಗೊರ್ತಿ ಶ್ರೀನಿವಾಸಲು, ಬಿ.ರಮೇಶ, ಅಗಳಿ ಪಂಪಾಪತಿ, ಜಿ.ಶ್ರೀನಿವಾಸ, ಬಿ.ದೇವೇಂದ್ರ, ವೈ.ಮುರುಳಿಮೋಹನರೆಡ್ಡಿ, ಈರಣ್ಣ, ಪ್ರಭು, ಮನೋಜಗೌಡ, ಕೆ.ರಂಗಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.