ಬ್ಯಾಡಗಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬ್ಯಾಡಗಿ ಮಂಡಲದ ವತಿಯಿಂದ ಪಟ್ಟಣದ ಹಳೆ ಪುರಸಭೆ ಎದುರು ವಿಜಯೋತ್ಸವ ನಡೆಸಲಾಯಿತು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದರು.
ಮೋದಿ ಬಿರುಗಾಳಿ ನಿಲ್ಲಲ್ಲ: ಮಾಜಿ ತಾಲೂಕಾಧ್ಯಕ್ಷ ಬಿಜೆಪಿ ಮುಖಂಡ ಹಾಲೇಶ ಜಾಧವ ಮಾತನಾಡಿ, ಮೋದಿ ಅವರ ದೂರದೃಷ್ಟಿ ಯೋಜನೆಗಳು ಸಂಚಲನ ಮೂಡಿಸಿ ಭಾರತದ ಭವಿಷ್ಯ ಬರೆಯುತ್ತಿದೆ. ಅವರ ಆಡಳಿತಕ್ಕೆ ಜಗತ್ತೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಮುಂಬರುವ ದಿನಗಳಲ್ಲಿ ಭಾರತ ಸೂಪರ ಪವರ ದೇಶವಾಗಲಿದೆ ಎಂದರಲ್ಲದೇ ಸಂಕನೂರು ಅವರ ಗೆಲುವು ಪಕ್ಷದ ಸಂಘಟಿತ ಪ್ರಯತ್ನ ಹಾಗೂ ಕಾರ್ಯ ಕರ್ತರ ಶ್ರಮಕ್ಕೆ ದೊರೆತ ಫಲವಾಗಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲ ನೀಡಿದ ಪದವೀಧರ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಬ್ಯಾಲೇಟ್ ಪೇಪರನಲ್ಲೇ ಗೆಲವು: ಮುಖಂಡ ಎಂ.ಎಸ್.ಪಾಟೀಲ ಮಾತನಾಡಿ, ಇವಿಎಂ ಬೇಡ ಎಂದು ಬೊಬ್ಬೆ ಹಾಕುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಶಿಕ್ಷಕರ, ಪದವೀಧರ ಚುನಾವಣೆ ಫಲಿತಾಂಶ ತಕ್ಕ ಪಾಠ ಕಲಿಸಿದೆ. ಬ್ಯಾಲೇಟ್ ಪೇಪರ ಮತದಾನ ನಡೆಸಿದರೂ ಸಹ ಒಂದೇ ಒಂದು ಸೀಟ್ ಗೆಲ್ಲಲಾಗದ ಕಾಂಗ್ರೆಸ್ ದೇಶದಲ್ಲಿ ನಾಶವಾಗುತ್ತಾ ಸಾಗುತ್ತಿದೆ ಎಂದರು. ವಿಜಯೋತ್ಸವದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪುರಸಭೆ ಮಾಜಿ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವ ಹಿಸಿದ್ದರು.