ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸೇರಿದಂತೆ ಶಿಕ್ಷಕರಿಗೆ ಶಾಲೆಯಲ್ಲಿ ಹೆಚ್ಚುವರಿ ಕೆಲಸ ಇರುತ್ತವೆ. ಇದರ ನಡುವೆ ಬೂತ್ ಮಟ್ಟದ ಅಧಿಕಾರಿ ಕೆಲಸ ನಿಭಾಯಿಸಲು ಇಲಾಖೆಯಿಂದ ಸೂಚಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಶಿಕ್ಷಕರ ಸಹಕಾರ ಅಗತ್ಯವಿದೆ. ಹೆಚ್ಚುವರಿ ಕೆಲಸಗಳಿಂದ ಶಿಕ್ಷಕರಿಗೆ ಹೊರೆಯಾಗುವುದಲ್ಲದೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕ ಶಿಕ್ಷಕರ ವಲಯದಲ್ಲಿ ವ್ಯಕ್ತವಾಗಿದೆ.
ಯಲಬುರ್ಗಾ ಹಾಗೂ ಕುಕನೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೧೯೩ ಪ್ರಾಥಮಿಕ ಶಾಲೆಗಳಿದ್ದು, ೫ ಅನುದಾನಿತ ಶಾಲೆಗಳಿವೆ. ಸರ್ಕಾರಿ ಶಾಲೆಗಳ ಒಂದಿಬ್ಬರು ಶಿಕ್ಷಕರನ್ನು ಬಿಟ್ಟರೆ ಉಳಿದೆಲ್ಲ ಶಿಕ್ಷಕರಿಗೆ ಬಿಎಲ್‌ಒ ಜವಾಬ್ದಾರಿ ವಹಿಸಲಾಗಿದೆ.ಬಿಎಲ್‌ಒ ಕೆಲಸ ತಿಂಗಳು ಪರ್ಯಂತ ಇರುತ್ತದೆ. ಈ ಕೆಲಸಕ್ಕೆ ನಿಯೋಜನೆಯಾದವರ ಹೊರತಾಗಿ ಶಾಲೆಯಲ್ಲಿ ಬೆರಳೆಣಿಕೆಯಷ್ಟು ಶಿಕ್ಷಕರು ಮಾತ್ರ ಉಳಿಯುತ್ತಾರೆ. ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು, ವಿವಿಧ ಶೈಕ್ಷಣಿಕ ಚಟುವಟಿಕೆ ನಿಭಾಯಿಸಲು ಇವರಿಂದ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಸರ್ಕಾರಿ ಶಾಲೆ ಬಗ್ಗೆ ಆರಂಭಿಕ ಹಂತದಲ್ಲಿಯೇ ಉತ್ತಮ ಭಾವನೆ ಮೂಡಿಸುವುದಕ್ಕೂ ಕಷ್ಟವಾಗುತ್ತದೆ. ಬುನಾದಿ ಸರಿಯಾಗಿರದಿದ್ದರೆ ಮುಂದಿನ ಚಟುವಟಿಕೆ ಸರಾಗವಾಗಿ ಸಾಗುವುದು ಕಷ್ಟ ಎಂಬುದು ಶಿಕ್ಷಕರ ಅಭಿಮತ.
ಹೋರಾಟದ ಎಚ್ಚರಿಕೆ: ಬಡವರು, ಕೃಷಿಕರು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದವರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶಾತಿ ಪಡೆಯುತ್ತಾರೆ. ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಗಳ ಹೊರತಾಗಿ ಬೇರೆಯದೇ ಕೆಲಸ ವಹಿಸುತ್ತಿರುವುದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳತ್ತ ಶಿಕ್ಷಕರು ಗಮನ ನೀಡಲು ಆಗುವುದಿಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದಾದರೂ ಶಿಕ್ಷಕರಿಗೆ ಬಿಎಲ್‌ಒ ಕೆಲಸದಿಂದ ಮುಕ್ತಿ ನೀಡಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಪೋಷಕರಾದ ಮಲ್ಲಪ್ಪ ಮುಡಿಯಪ್ಪನವರ, ಮಂಜುನಾಥ ಕಳಸಪ್ಪನವರ, ಶಿವುಕುಮಾರ ನಾಗನಗೌಡ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗದಂತೆ ಅಕ್ಟೋಬರ್ ತಿಂಗಳವರೆಗೆ ಬಿಎಲ್‌ಒ ಕಾರ್ಯಕ್ಕೆ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಯಲಬುರ್ಗಾ ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.