ನೀರಿನ ಕರ ಪಾವತಿ ಒಟಿಎಸ್‌ಗೆ ಬೆಂಗಳೂರಿಗೆ ನಿಯೋಗ

KannadaprabhaNewsNetwork |  
Published : Jun 26, 2026, 02:00 AM IST
ಮದಮದಮ | Kannada Prabha

ಸಾರಾಂಶ

ಕುಡಿಯುವ ನೀರಿನ ಒಟಿಎಸ್‌ ಗೆಅನುಮೋದನೆ ನೀಡುವಂತೆ ಕೋರಿ ಸರ್ಕಾರ ಬಳಿ ಸರ್ವಪಕ್ಷದ ನಿಯೋಗ ಕೊಂಡೊಯ್ಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಣಯಿಸಿದೆ.

ಹುಬ್ಬಳ್ಳಿ: ಕುಡಿಯುವ ನೀರಿನ ಬಿಲ್‌ ಬಾಕಿ ವಸೂಲಿಗೆ ಒನ್‌ ಟೈಂ ಸೆಟಲ್ಮೆಂಟ್‌- ಒಟಿಎಸ್‌ (ಒಂದಾವರ್ತಿ ತಿರುವಳಿ ಯೋಜನೆ) ಈ ವರೆಗೂ ರಾಜ್ಯ ಸರ್ಕಾರ ಅನುಮೋದನೆ ನೀಡಿಲ್ಲ. ಅನುಮೋದನೆ ನೀಡುವಂತೆ ಕೋರಿ ಸರ್ಕಾರ ಬಳಿ ಸರ್ವಪಕ್ಷದ ನಿಯೋಗ ಕೊಂಡೊಯ್ಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಣಯಿಸಿದೆ.

ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆ ಬಳಿಕ ಈ ಕುರಿತು ನಿರ್ಣಯಿಸಲಾಯಿತು. ಅಲ್ಲದೇ, ಜು. 4ರೊಳಗೆ ನಿಯೋಗ ಕೊಂಡೊಯ್ಯುವುದು ಒಟಿಎಸ್‌ ಸಂಬಂಧಪಟ್ಟಂತೆ ಸರ್ಕಾರದ ಅನುಮೋದನೆ ಪಡೆಯಲು ನಿರ್ಣಯ ಕೈಗೊಂಡಿತು.

₹195 ಕೋಟಿ ಅಸಲು ಮತ್ತು ₹128 ಕೋಟಿ ಬಡ್ಡಿ ವಸೂಲಿಯಾಗಿದೆ. ಒಂದೇ ಬಾರಿ ಅಸಲು ಪಾವತಿಸುವ ಗ್ರಾಹಕರಿಗೆ ಬಡ್ಡಿ ಮನ್ನಾ ಮಾಡುವ ಯೋಜನೆ ಜಾರಿಗೆ ಅವಕಾಶ ನೀಡುವಂತೆ ಹಲವು ಬಾರಿ ಠರಾವು ಮಾಡಿ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಈ ವರೆಗೂ ಪ್ರತಿಕ್ರಿಯೆ ಬಂದಿಲ್ಲ. ಸರಕಾರ ನಿರಾಸಕ್ತಿ ಧೋರಣೆ ತಳೆದಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಬಿಜೆಪಿ ತಿಪ್ಪಣ್ಣ ಮಜ್ಜಗಿ ಪ್ರಸ್ತಾಪಿಸಿದರು. ಒಟಿಎಸ್‌ನಿಂದ ಬಡವರಿಗೂ ಸಹಾಯವಾಗಲಿದೆ. ಮಹಾನಗರ ಪಾಲಿಕೆಗೂ ಅನುಕೂಲವಾಗಲಿದೆ. ₹195 ಕೋಟಿ ಅಸಲು ಬಂದರೂ ಪಾಲಿಕೆಗೆ ದೊಡ್ಡ ಮೊತ್ತ. ಇದರಿಂದ ಸಾಕಷ್ಟು ಕೆಲಸಗಳು, ವಂತಿಗೆ, ಸಾಲ ವಂತಿಗೆ ಪಾವತಿಸಲು ಸಹಾಯವಾಗಲಿದೆ. ಪ್ರಸ್ತಾವನೆಗೆ ಫಾಲೋಅಪ್ ಯಾಕೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿಪಕ್ಷ ಸದಸ್ಯ ಆರೀಫ್‌ ಭದ್ರಾಪುರ ಮಾತನಾಡಿ, ಒಟಿಎಸ್ ಜಾರಿಗೆ ಒತ್ತಾಯಿಸಿ ಹೋರಾಟ ಮಾಡೋಣ ಎಂದು ಸಲಹೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು.

ಏತನ್ಮಧ್ಯೆ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ ಮತ್ತು ಸುವರ್ಣ ಕಲ್ಲಕುಂಟ್ಲ ಮಾತನಾಡಿ, ಇತ್ತೀಚೆಗೆ ನಗರದಲ್ಲಿ ಕೆಲಕಾಲ ಇದ್ದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಶಾಸಕ ಪ್ರಸಾದ ಅಬ್ಬಯ್ಯ ಅವರು ಎಲ್ಲ ಮಾಹಿತಿ ನೀಡಿ ಮನವರಿಕೆ ಮಾಡಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕ ಸ್ಪಂದಿಸಿದ್ದು, ಬೆಂಗಳೂರಿಗೆ ಬಂದು ಭೇಟಿಯಾಗುವಂತೆ ಸಲಹೆ ನೀಡಿದ್ದಾರೆ ಎಂದು ವಿವರಿಸಿದರು. ಮಧ್ಯಪ್ರವೇಶಿಸಿದ ತಿಪ್ಪಣ್ಣ ಮಜ್ಜಗಿ, ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಂತೂ ನಮ್ಮ ಕೆಲಸ ಮಾಡಲಿಲ್ಲ. ಈಗ ಅವರ ಪುತ್ರರಾದರೂ ಕೆಲಸ ಮಾಡಲಿ ಎಂದು ಛೇಡಿಸಿದರು.

ಸದಸ್ಯರ ಸಲಹೆ ಮೇರೆಗೆ ಸರ್ವಪಕ್ಷ ಸದಸ್ಯರನ್ನೊಳಗೊಂಡು ಬಸ್ ಮೂಲಕ ಬೆಂಗಳೂರಿಗೆ ನಿಯೋಗ ಹೋಗಿ ಸಚಿವರ ಭೇಟಿ ಮಾಡಿ ಒಟಿಎಸ್‌ಗೆ ಅನುಮತಿ ನೀಡುವಂತೆ ಮತ್ತೊಮ್ಮೆ ಒತ್ತಾಯಿಸೋಣ ಎಂದು ರೂಲಿಂಗ್ ನೀಡಿದರು.

ಬಡ್ಡಿ ಬಿಟ್ಟು ಅಸಲು ಪಾವತಿಸಲಿ!

ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿ ಪಡೆದಾಗಿನಿಂದಲೂ ಎಲ್ ಆ್ಯಂಡ್ ಟಿ ಅವರು ಪ್ರತಿತಿಂಗಳೂ ಬಿಲ್ ವಸೂಲಿ ಮಾಡುತ್ತಿದ್ದಾರೆ. ಹಾಗಾಗಿ ಜಲಮಂಡಳಿಯು ವ್ಯವಸ್ಥೆಯನ್ನು ಎಲ್ ಆ್ಯಂಡ್ ಟಿ ಗೆ ಹಸ್ತಾಂತರ ವರೆಗಿನ ನೀರಿನ ಬಾಕಿ ಮೊತ್ತವನ್ನು ಮಾತ್ರ ಪಾಲಿಕೆ ವಸೂಲು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ಬಿಟ್ಟು ಅಸಲು ಪಾವತಿಸಲು ಗ್ರಾಹಕರಿಗೆ ಅವಕಾಶ ನೀಡಬೇಕು. ಸರ್ಕಾರ ಒಟಿಎಸ್‌ಗೆ ಅನುಮೋದನೆ ನೀಡಿದ ಬಳಿಕ ಅಧಿಕೃತವಾಗಿ ಬಡ್ಡಿ ಮನ್ನಾ ಘೋಷಿಸಬಹುದಾಗಿದೆ ಎಂದು ಸಭಾನಾಯಕ ಈರೇಶ ಅಂಚಟಗೇರಿ ಸಲಹೆ ಮಾಡಿದರು.

ನಿವೇಶನ ಸ್ವಚ್ಛಗೊಳಿಸಿಕೊಳ್ಳದಿದ್ದರೆ ಡಬಲ್‌ ಟ್ಯಾಕ್ಸ್‌!

ಹುಬ್ಬಳ್ಳಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಬೇಕು. ಒಂದು ವೇಳೆ ಸ್ವಚ್ಛಗೊಳಿಸದಿದ್ದಲ್ಲಿ ಪಾಲಿಕೆಯೇ ಸ್ವಚ್ಛಗೊಳಿಸಿ ಡಬಲ್‌ ಟ್ಯಾಕ್ಸ್‌ ವಿಧಿಸಬೇಕಾಗುತ್ತದೆ ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.ಹು-ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಶಿವು ಹಿರೇಮಠ ಈ ವಿಷಯ ಪ್ರಸ್ತಾಪಿಸಿದರು. ಆಗ ಅಧಿಕಾರಿ ಸಂತೋಷ ಯರಂಗಳಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 1.93 ಲಕ್ಷ ಮನೆಗಳಿವೆ. 35 ಸಾವಿರ ವಾಣಿಜ್ಯ ಮಳಿಗೆಗಳಿವೆ. 1.35 ಲಕ್ಷ ಖಾಲಿ ನಿವೇಶನಗಳಿವೆ. ಈ ಪೈಕಿ 71 ಸಾವಿರ ನಿವೇಶನಗಳ ಮಾಲೀಕರು ತಮ್ಮ ತೆರಿಗೆಯನ್ನು ಕಳೆದ ವರ್ಷ ಪಾವತಿಸಿದ್ದಾರೆ ಎಂದರು.ಅದಕ್ಕೆ ಹಿರೇಮಠ, ಖಾಲಿ ನಿವೇಶನಗಳಲ್ಲಿ ಮುಳ್ಳು ಗಿಡಕಂಟಿಗಳು ಸಾಕಷ್ಟು ಬೆಳೆದಿವೆ. ಖಾಲಿ ನಿವೇಶನಗಳಿಗೆ ಟ್ಯಾಕ್ಸ್‌ ಪಡೆಯುತ್ತೇವೆ. ಹೀಗಾಗಿ, ಪಾಲಿಕೆ ಸ್ವಚ್ಛಗೊಳಿಸುವುದಾಗಿ ಆಯುಕ್ತರು ಹಿಂದೆ ಹೇಳಿದ್ದರು ಎಂದು ತಿಳಿಸಿದರು. ಇದೀಗ ಅವುಗಳನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.

ಆಗ ಆಯುಕ್ತ ರುದ್ರಪ್ಪ ಘಾಳಿ, ಎಸ್‌ಡಬ್ಲುಎಂನ ಸೆಸ್‌ ಅದು. ಹೀಗಾಗಿ ಮಾಲೀಕರೇ ಸ್ವಚ್ಛಗೊಳಿಸಿಕೊಳ್ಳಬೇಕು ಎಂದರು. ಅದಕ್ಕೆ ಹಿರೇಮಠ, ಹಿಂದೆ ಆಯುಕ್ತರು ಏನು ಹೇಳಿದ್ದರು. ಯಾವಾಗ ಹೇಳಿದ್ದರು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು.ಕಸ ತಂದು ಹಾಕ್ತೇನೆ

ನವನಗರದಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಆಗ್ರಹಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಅಲ್ಲಿನ ಕಸ ತಂದು ಪಾಲಿಕೆ ಆವರಣದಲ್ಲಿ ಹಾಕ್ತೇನೆ ಎಂದು ಸದಸ್ಯ ಚಂದ್ರಶೇಖರ ಮನಗುಂಡಿ ಎಚ್ಚರಿಕೆ ನೀಡಿದರು.ಕೊನೆಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಿ. ಅವರು ಸ್ವಚ್ಛಗೊಳಿಸದಿದ್ದಲ್ಲಿ ಪಾಲಿಕೆಯಿಂದ ಸ್ವಚ್ಛಗೊಳಿಸಿ ಡಬಲ್‌ ಟ್ಯಾಕ್ಸ್‌ ವಿಧಿಸಿ. ಸರ್ಕಾರಿ ಇಲಾಖೆಗಳ ಖಾಲಿ ಜಾಗೆ ಸ್ವಚ್ಛಗೊಳಿಸಿಕೊಳ್ಳುವಂತೆ ಆಯಾ ಇಲಾಖೆಗೆ ತಿಳಿಸಿ ಎಂದು ರೂಲಿಂಗ್‌ ನೀಡಿದರು. ಜತೆಗೆ ಡೆಂಘೀ ತಡೆಯಲು ವಾರದೊಳಗೆ ಎಲ್ಲೆಡೆ ಫಾಗಿಂಗ್‌ ಮಾಡಿಸಬೇಕು ಎಂದು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಸ್ತಾಂತರ
ಸರ್ಕಾರಿ ಶಾಲಾ ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕೆ ಆಗ್ರಹ