ಬಳ್ಳಾರಿ: ಬಳ್ಳಾರಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನೆ ಕೇಂದ್ರದ ವೈದ್ಯರೊಬ್ಬರ ನಿರ್ಲಕ್ಷ್ಯಕ್ಕೆ ದೇವದಾಸಿ ವಿಮೋಚನಾ ಹೋರಾಟಗಾರ್ತಿ ಎಚ್.ದುರ್ಗಮ್ಮ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ತನಿಖೆ ನಡೆಸಬೇಕು. ಪರಿಹಾರವಾಗಿ ₹50 ಲಕ್ಷ ನೀಡಬೇಕು ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ್ ಒತ್ತಾಯಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ನಿರಂತರವಾಗಿ ಮೂತ್ರ ವಿಸರ್ಜನೆಯಾಗುವ ಸಮಸ್ಯೆ ಶುರುವಾಗಿದ್ದು, ಮತ್ತೆ ವೈದ್ಯರನ್ನು ಭೇಟಿ ಮಾಡಿದಾಗ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಾಗುವಂತೆ ಹೇಳಿದ್ದು, ವೈದ್ಯರ ಸಲಹೆಯಂತೆಯೇ ಟ್ರಾಮಾ ಕೇರ್ ಕೇಂದ್ರಕ್ಕೆ ದಾಖಲು ಆದ ಬಳಿಕ ಈ ಮೊದಲು ಶಸ್ತ್ರಚಿಕಿತ್ಸೆ ಮಾಡಿದ ವೇಳೆ ನರವೊಂದನ್ನು ಸರಿಪಡಿಸಲಾಗಿಲ್ಲ ಎಂದು ಹೇಳಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಎರಡನೇ ಶಸ್ತ್ರಚಿಕಿತ್ಸೆ ಬಳಿಕವೂ ಆರೋಗ್ಯ ಸುಧಾರಣೆ ಕಂಡಿಲ್ಲ. ಬದಲಿಗೆ ತೀವ್ರತರವಾದ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಪರೀಕ್ಷಿಸಲಾಗಿ ಹೊಟ್ಟೆಯಲ್ಲಿಯೇ ಸ್ಟೀಲ್ ರಿಂಗ್ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಕೇಳಿದಾಗ ಆಪರೇಷನ್ ಮಾಡಿದ ವೈದ್ಯ ಡಾ.ಇಮ್ದಾದ್ ಅಲಿ ಎಂಬುವರು ತಮ್ಮದೇ ಖಾಸಗಿ ಆಸ್ಪತ್ರೆಗೆ ಬಂದರೆ ಶಸ್ತ್ರಚಿಕಿತ್ಸೆ ಮಾಡಿ ಸ್ಟೀಲ್ ರಿಂಗ್ ಹೊರ ತೆಗೆಯುವುದಾಗಿ ಹೇಳಿದ್ದಾರೆ. ಬಳಿಕ ಇಮ್ದಾದ್ ಅಲಿ ಅವರ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಸ್ಟೀಲ್‌ರಿಂಗ್ ಹೊರ ತೆಗೆಯಲಾಗಿದೆ. ವೈದ್ಯ ಇಮ್ದಾದ್ ಅಲಿ ಅವರು ತಾವೇ ನಿರ್ಲಕ್ಷ್ಯ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದರೂ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲು ₹16,750 ಪಡೆದಿದ್ದಾರೆ. ವೈದ್ಯರೊಬ್ಬರ ನಿರ್ಲಕ್ಷ್ಯಕ್ಕೆ ದಲಿತ ಮಹಿಳೆ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತಾಗಿದೆ. ಅವರ ಆರೋಗ್ಯದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರಿದ್ದು, ಇದಕ್ಕೆ ಹೊಣೆ ಯಾರು? ಎಂದು ಯು.ಬಸವರಾಜ್ ಪ್ರಶ್ನಿಸಿದರು.
ಈ ಪ್ರಕರಣ ತನಿಖೆಗೆ ನಡೆಸಬೇಕು. ಮಹಿಳೆಗೆ ₹50 ಲಕ್ಷ ಪರಿಹಾರ ನೀಡಬೇಕು. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಸ್ಪಂದಿಸದೇ ಹೋದಲ್ಲಿ ಹೋರಾಟ ಕೈಗೊಳ್ಳಲಾಗುವುದು. ನಿರ್ಲಕ್ಷ್ಯ ಮಾಡಿದ ವೈದ್ಯನ ವಿರುದ್ಧ ಕಾನೂನು ಹೋರಾಟ ಸಹ ಮಾಡಲಾಗುವುದು ಎಂದು ತಿಳಿಸಿದರು.ದೇವದಾಸಿ ವಿಮೋಚನಾ ಸಂಘದ ಪ್ರಮುಖರಾದ ಎನ್.ಸ್ವಾಮಿ ಹಾಗೂ ಶಂಕ್ರಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
ಒಪಿಡಿಗೆ ಬಡವರು ಮಾತ್ರ ಹೋಗಲು ಸಾಧ್ಯ. ಅಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುವುದಿಲ್ಲ. ಬಡವರು ಎಂದು ಗೊತ್ತಾದರೆ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾರೆ. ಈವರೆಗೆ ನಾನು ₹3 ಲಕ್ಷ ಖರ್ಚು ಮಾಡಿಕೊಂಡಿದ್ದೇನೆ. ಹಲವು ತಿಂಗಳು ಕಾಲ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸಿದ್ದೇನೆ. 15 ದಿನ ನಿರಂತರ ವಾಂತಿಯಾದರೂ ಚಿಕಿತ್ಸೆ ನೀಡಲಿಲ್ಲ ಎಂದು ಎಚ್.ದುರ್ಗಮ್ಮ ಅಳಲು ತೋಡಿಕೊಂಡರು.