ಬಳ್ಳಾರಿ: ಮಹಿಳೆಯರಿಗೆ ಶಾಸನಸಭೆಗಳಲ್ಲಿ ಮೀಸಲಾತಿ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಇದನ್ನು ಈಡೇರಿಸಲು ಯಾರೊಬ್ಬರು ಮುಂದಾಗಿರಲಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮಹಿಳೆಯರ ಪರವಾಗಿ ನಿಂತು ಮೀಸಲಾತಿ ಅನುಷ್ಠಾನಕ್ಕೆ ಮುಂದಡಿ ಇಟ್ಟಿದ್ದಾರೆ ಎಂದು ಕೊಪ್ಪಳದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ತಿಳಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನೇಕ ಮಹಿಳಾಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರಮುಖವಾಗಿ ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚು ಆದ್ಯತೆ ನೀಡಿ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದೆ. ಶಾಸನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರಬೇಕು ಎಂಬುದು ಪ್ರಧಾನಮಂತ್ರಿಗಳ ಅಭಿಲಾಷೆಯಾಗಿತ್ತು. ಹೀಗಾಗಿಯೇ ಮೀಸಲಾತಿ ಮಸೂದೆಯನ್ನು ಜಾರಿಗೆ ತರುತ್ತಿದ್ದಾರೆ ಎಂದರು.
ಮಹಿಳಾ ಮೀಸಲಾತಿ ವಿಚಾರವಾಗಿ 15 ವರ್ಷದ ಹಿಂದೆ ಸಂಸತ್ತಿನಲಿ ಚರ್ಚೆಗೆ ಬಂದಾಗ ಮಸೂದೆಯ ಕಾಗದಪತ್ರಗಳನ್ನು ಹರಿದು ಹಾಕಿದ ಘಟನೆ ನಡೆದಿತ್ತು. ಇಂದಿರಾ ಗಾಂಧಿ ಪ್ರಧಾನಿ ಆಗಿದ್ದ ಪಕ್ಷದಲ್ಲಿ ಸೋನಿಯಾ ಗಾಂಧಿ ಯುಪಿಎ ನಿಯಂತ್ರಿಸುತ್ತಿದ್ದಾಗ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಿತು. ಆದರೆ, ಕಾಂಗ್ರೆಸ್‌ನವರು ಮಹಿಳಾ ಮೀಸಲಾತಿ ಪರವಾಗಿ ಇರಲಿಲ್ಲ. ಹೀಗಾಗಿಯೇ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿದ್ದರು ಎಂದರು.ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಕ್ಷಬೇಧ ಮರೆತು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ ಸದನಗಳಲ್ಲಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಪಕ್ಷದ ಮಹಿಳಾ ಘಟಕದ ಪ್ರಮುಖರಾದ ಡಾ.ರೇಣುಕಾ, ವಿಜಯಲಕ್ಷ್ಮಿ, ಡಾ.ಅರುಣಾ ಕಾಮಿನೇನಿ, ಸಾಧನಾ ಹಿರೇಮಠ, ಸುಗುಣ, ಅಲುವೇಲು, ಹಂಪಿ ರಮಣಾ ಸುದ್ದಿಗೋಷ್ಠಿಯಲ್ಲಿದ್ದರು.