ನಾಡದೋಣಿ ಮೀನುಗಾರಿಕೆ: ಆಗ ತೂಫಾನ್‌ ಹೊಡೆತ, ಈಗ ಮೀನುಗಳ ಬರ!

KannadaprabhaNewsNetwork |  
Published : Jul 06, 2025, 11:48 PM IST
ದಡದಲ್ಲಿರುವ ನಾಡದೋಣಿಗಳು | Kannada Prabha

ಸಾರಾಂಶ

ವರ್ಷಂಪ್ರತಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ನಾಡದೋಣಿ ಮೀನುಗಾರರ ಬೇಟೆಯ ಅವಧಿ. ಈ ಬಾರಿ ಜೂನ್‌ ತಿಂಗಳು ಪೂರ್ತಿ ಕಡಲಿಗೆ ಇಳಿಯಲು ಸಮುದ್ರದಲ್ಲಿ ತಲೆದೋರಿದ ಸೈಕ್ಲೋನ್‌, ತೂಫಾನ್‌ ಅಡ್ಡಿಯಾಗಿದೆ. ಕೊನೆಗೂ ಒಂದು ತಿಂಗಳ ಬಳಿಕ ಈಗ ಜುಲೈನಲ್ಲಿ ನಾಡದೋಣಿಗಳು ಕಡಲಿಗೆ ಇಳಿಯುತ್ತಿವೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರುಮಳೆಗಾಲದ ಋತುವಿನ ನಾಡದೋಣಿ ಮೀನುಗಾರಿಕೆ ಈ ಬಾರಿ 15 ದಿನ ವಿಳಂಬವಾಗಿ ಶುರುವಾಗಿದೆ. ನಾಡದೋಣಿ ಮೀನುಗಾರರು ಶುಕ್ರವಾರ ಮೀನು ಬೇಟೆಗೆ ಇಳಿದಿದ್ದಾರೆ. ಈ ಬಾರಿ ಆರಂಭದಲ್ಲೇ ಸಮುದ್ರದಲ್ಲಿ ಎದ್ದ ತೂಫಾನ್‌ ನಾಡದೋಣಿ ಮೀನುಗಾರಿಕೆಗೆ ಅಡ್ಡಿಪಡಿಸಿದ್ದರೆ, ಈಗ ಮತ್ಸ್ಯಸಂಪತ್ತು ಸಿಗದೆ ನಾಡದೋಣಿಗಳು ಖಾಲಿಯಾಗಿ ದಡ ಸೇರುವಂತಾಗಿದೆ.

ವರ್ಷಂಪ್ರತಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ನಾಡದೋಣಿ ಮೀನುಗಾರರ ಬೇಟೆಯ ಅವಧಿ. ಈ ಬಾರಿ ಜೂನ್‌ ತಿಂಗಳು ಪೂರ್ತಿ ಕಡಲಿಗೆ ಇಳಿಯಲು ಸಮುದ್ರದಲ್ಲಿ ತಲೆದೋರಿದ ಸೈಕ್ಲೋನ್‌, ತೂಫಾನ್‌ ಅಡ್ಡಿಯಾಗಿದೆ. ಕೊನೆಗೂ ಒಂದು ತಿಂಗಳ ಬಳಿಕ ಈಗ ಜುಲೈನಲ್ಲಿ ನಾಡದೋಣಿಗಳು ಕಡಲಿಗೆ ಇಳಿಯುತ್ತಿವೆ. ಮಂಗಳೂರಿನ ನವ ಮಂಗಳೂರು ಬಂದರು(ಎನ್‌ಎಂಪಿಎ) ಮೂಲಕ ಸೋಮೇಶ್ವರ ಹಾಗೂ ಮಲ್ಪೆ ವರೆಗೆ ತೆರಳಿ ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಒಂದೆರಡು ನಾಡದೋಣಿ ಮೀನುಗಾರರು ಸೋಮವಾರದಿಂದಲೇ ಮೀನುಗಾರಿಕೆಗೆ ತೆರಳಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಮುದ್ರ ತೀರಕ್ಕೆ ಇನ್ನೂ ಬಂದಿಲ್ಲ. ಹೀಗಾಗಿ ನಾಡದೋಣಿ ಗಾಳಕ್ಕೆ ಮೀನುಗಳೇ ಸಿಗುತ್ತಿಲ್ಲ. ಮಂಗಳೂರಲ್ಲಿ ಸುಮಾರು 250 ನಾಡದೋಣಿಗಳಿದ್ದು, ಮೊದಲ ದಿನವೇ ಶೇ.50 ರಷ್ಟು ನಾಡದೋಣಿಗಳು ಮೀನು ಸಿಗದೆ ದಡ ಸೇರಿವೆ. ಇದು ನಾಡದೋಣಿ ಮೀನುಗಾರರನ್ನು ಕಂಗೆಡುವಂತೆ ಮಾಡಿದೆ. ಮಂಗಳೂರು ಸಮುದ್ರ ತೀರದ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತಿದೆ. ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಘಡಗಳ ಸಂದರ್ಭ ಸಹಕಾರಿಯಾಗುವ ದಿಶೆಯಲ್ಲಿ ನಾಡದೋಣಿಗಳು ಎನ್‌ಎಂಪಿಎ ಮೂಲಕ ತೆರಳಿ ಮೀನುಗಾರಿಕೆ ನಡೆಸುತ್ತಿವೆ. ಪ್ರತಿ ಬಾರಿ ಎನ್‌ಎಂಪಿಎ ತನ್ನ ಸರಹದ್ದು ಪ್ರವೇಶ ಹಾಗೂ ನಿರ್ಗಮನ ಗುರುತಿಗೆ ನಾಡದೋಣಿ ಮೀನುಗಾರರಿಗೆ ಗುರುತಿನ ಚೀಟಿ ನೀಡುತ್ತದೆ. ಈ ಬಾರಿ ಜೂನ್‌ ಪ್ರಥಮ ಬದಲು ಜೂನ್‌ ಕೊನೆಗೆ ಗುರುತಿನ ಚೀಟಿ ವಿತರಿಸಿದೆ. ಸಮುದ್ರ ಪ್ರಕ್ಷುಬ್ಧ ಸಂದರ್ಭಗಳಲ್ಲಿ ನಾಡದೋಣಿ ಮೀನುಗಾರಿಕೆಯನ್ನು ನಿರ್ಬಂಧಿಸಲಾಗುತ್ತದೆ. ನಾಡದೋಣಿ ನಿಲುಗಡೆಗೆ ಜಾಗದ ಕೊರತೆ

ಸರಕು ನಿರ್ವಹಣೆ ನಡೆಸುತ್ತಿರುವ ಎನ್ಎಂಪಿಎಯಲ್ಲಿ ನಾಡದೋಣಿ ನಿಲುಗಡೆಗೆ ಪ್ರತ್ಯೇಕ ಬರ್ತ್‌ ನಿಗದಿಪಡಿಸಲಾಗಿದೆ. ಇದು ಮಳೆಗಾಲದಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತಿದೆ. ನಂಬರ್‌ 7 ಬರ್ತ್‌ನ್ನು ಇದಕ್ಕಾಗಿಯೇ ಮೀಸಲಿಡಲಾಗಿದೆ. ಈ ಬಾರಿ ಈ ಬರ್ತ್‌ನಲ್ಲಿ ಕಲ್ಲು, ಮಣ್ಣು ಹಾಕಲಾಗಿದ್ದು, ನಾಡದೋಣಿ ಎಳೆದು ದಡದಲ್ಲಿ ನಿಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಮೀಪದಲ್ಲೇ ಎನ್‌ಎಂಪಿಎ ಸರಕು ಗೋದಾಮು ನಿರ್ಮಿಸುತ್ತಿದ್ದು, ಅದರಕ್ಕೆ ಬೇಕಾದ ಸಲಕರಣೆಗಳನ್ನು ಇದೇ ಬರ್ತ್‌ನಲ್ಲಿ ರಾಶಿ ಹಾಕಲಾಗಿದೆ. ಇದನ್ನು ತೆರವುಗೊಳಿಸುವಂತೆ ಸಂಸದರು, ಶಾಸಕರು ಹಾಗೂ ಅಧಿಕಾರಿಗಳಿಗೆ ನಾಡದೋಣಿ ಮೀನುಗಾರರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುವುದು ನಾಡದೋಣಿ ಮೀನುಗಾರರ ಅಳಲು. ಹಾಗಾಗಿ ನೀರಿನಿಂದ ದಡಕ್ಕೆ ದೋಣಿ ಎಳೆಯಲು ಸಾಧ್ಯವಾಗದೆ ನೀರಿನಲ್ಲೇ ಆ್ಯಂಕರ್‌ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಳೆಗಾಲದಲ್ಲಿ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದೆವು. ಆದರೆ ಇಡೀ ದಿನ ಮೀನುಗಾರಿಕೆ ನಡೆಸಿದರೂ ಏಳೆಂಟು ದೋಣಿ ಹೊರತುಪಡಿಸಿ ಬೇರೆ ದೋಣಿಗಳು ಬರಿಗೈಯಲ್ಲಿ ಮರಳಿವೆ. ಈ ಅವಧಿಯಲ್ಲಿ ಪ್ರತಿ ವರ್ಷ 25ರಿಂದ 30 ಸಾವಿರ ಮೀನುಗಳು ಸಿಗುತ್ತಿತ್ತು. ಈ ಬಾರಿ ಇನ್ನೂ ಮೀನುಗಳು ದಡಕ್ಕೆ ಆಗಮಿಸಿಲ್ಲ.

-ವಸಂತ ಸುವರ್ಣ, ಅಧ್ಯಕ್ಷರು, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ, ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು