ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ಬ್ರಾಹ್ಮಣರ ಬೀದಿಯ ಲಕ್ಷ್ಮಣತೀರ್ಥ ನದಿತಟದಲ್ಲಿ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ಜಾಗರಣೆ ಅಂಗವಾಗಿ ವಿವಿಧ ಪೂಜೆ, ಹೋಮ-ಹವನ ನಡೆಯಿತು.
ಮೈಸೂರು ರಸ್ತೆಯಲ್ಲಿರುವ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೇ ಭಕ್ತಸಾಗರ ಶಿವನ ದರ್ಶನಕ್ಕಾಗಿ ಸ್ನಾನಾದಿಗಳನ್ನು ಮುಗಿಸಿ ಮಡಿಬಟ್ಟೆಯಲ್ಲಿ ಬಂದರು. ಗೋಪಾಲಕೃಷ್ಣ, ಶ್ರೀ ಆಂಜನೇಯ ಹಾಗೂ ಸರ್ಪಸಮೇತವಿರುವ ಸುಬ್ರಮಣ್ಯೇಶ್ವರ, ನವಗ್ರಹ ದೇವರುಗಳೂ ಇರುವ ಈ ಪ್ರಾಂಗಣದಲ್ಲಿ ಭಕ್ತರು ತಮ್ಮಿಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಪರವಶರಾದರು. ನವವಧುವರರು ಶ್ರದ್ಧಾಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು.ಮಂಜುನಾಥಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮ-ಹವನದ ನಂತರ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ನಡೆಸಲಾಯಿತು. ಪ್ರಸಾದ ವಿನಿಯೋಗ ನಡೆಯಿತು.
ಕಟ್ಟೆಮಳಲವಾಡಿ, ಗಾವಡಗೆರೆ, ಕಲ್ಕುಣಿಕೆ ಮತ್ತು ಪಟ್ಟಣದ ವಿವಿಧ ಬಡಾವಣೆಗಳಿಂದ ಭಕ್ತರು ತಂಡೋಪತಂಡವಾಗಿ ಬೆಳಗಿನಿಂದಲೇ ಬಂದು ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದ ವಿನಿಯೋನ ನಡೆಯಿತು.
ಪಟ್ಟಣದ ಎಚ್.ಡಿ. ಕೋಟೆ ವೃತ್ತದ ಹಾಗೂ ಸೇತುವೆ ಶ್ರೀ ಕನ್ಯಕಾಪರಿಮೇಶ್ವರಿ ಅಮ್ಮನವರ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆಗಳನ್ನು ನಡೆಯಿತು. ಭಕ್ತಾದಿಗಳು ಬಿಲ್ವಪತ್ರೆಯೊಂದಿಗೆ ಪೂಜಾಕಾರ್ಯ ನೆರವೇರಿಸಿ ಕೃತಾರ್ಥ ಭಾವ ಹೊಂದಿದರು. ಸಂಜೆ ಭಕ್ತಾದಿಗಳು ರುದ್ರಾಕ್ಷಿ ಮಣಿ, ವಿಭೂತಿಯೊಂದಿಗೆ ಶಿವಲಿಂಗಕ್ಕೆ ಸಲ್ಲಿಸಿ, ಅಭಿಷೇಕದ ನಂತರ ತಾವು ನೀಡಿದ ರುದ್ರಾಕ್ಷಿಯನ್ನು ಭಕ್ತಿಯಿಂದ ಸ್ವೀಕರಿಸಿ ಸಂಭ್ರಮಿಸಿದರು.
ಚಿಕ್ಕಹುಣಸೂರಿನ ಮಲೈಮಹದೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಕೆಂಡಗಣ್ಣೇಶ್ವರ ಗದ್ದುಗೆಯಲ್ಲಿ ಮಹದೇಶ್ವರ ಮತ್ತು ಕೆಂಡಗಣ್ಣೇಶ್ವರ ಸ್ವಾಮಿಗೆ ಪೂಜೆ, ಕರಿಮುದ್ದನಹಳ್ಳಿ, ಗಾವಡಗೆರೆ, ಯಮಗುಂಬದ ಬವಸವೇಶ್ವರ ದೇವಾಲಯಗಳು, ರಾಮೇನಹಳ್ಳೀ ಬೆಟ್ಟದ ಓಂಕಾರೇಶ್ವರ ಸ್ವಾಮಿ ದೇವಾಲಯ, ಕಲ್ಲೂರಪ್ಪನಬೆಟ್ಟದ ಕಲ್ಲೂರೇಶ್ವರಸ್ವಾಮಿ ದೇವಾಲಯ, ತಟ್ಟೆಕೆರೆಯ ರಾಮಾಂಜನೇಯ ದೇವಾಲಯ, ಹನಗೋಡಿನ ಈಶ್ವರ, ಆಂಜನೇಯ, ಅಯ್ಯಪ ದೇಗುಲಗಳು, ಬಿಳಿಕೆರೆ ಸಮೀಪದ ಸೋನಳ್ಳಿ-ಎಲಚನಹಳ್ಳಿಯ ಬೆಟ್ಟದ ಮೇಲಿನ ಕಾಲಭೈರವೇಶ್ವರ ದೇವಾಲಯ ಹೊಸರಾಮೇನಹಳ್ಳಿಯ ಆಂಜನೇಯ, ರಾಮಪಟ್ಟಣದ ಮಹದೇಶ್ವರ, ಕಟ್ಟೆಮಳಲವಾಡಿಯ ಕೋಡಿ ಗಣಪತಿ ದೇವಾಲಯಗಳಲ್ಲು ವಿಶೇಷ ಪೂಜೆ ನಡೆಸಿ ಪ್ರಸಾದ ವಿತರಿಸಲಾಯಿತು.