ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ರ ಕಲಂ 17 ರಡಿ ನಿರೀಕ್ಷಕರಾಗಿ ಅಧಿಸೂಚಿಸಲ್ಪಟ್ಟ ಅಧಿಕಾರಿಗಳ ತಂಡವನ್ನು ರಚಿಸಿ, ಪ್ರತಿ ತಂಡವು ಮಾಸಿಕ ಕನಿಷ್ಟ 15 ತಪಾಸಣೆಗಳನ್ನು ಕೈಗೊಳ್ಳುವಂತೆ ಮಾಸಿಕ ಗುರಿ ನಿಗದಿಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 743 ತಪಾಸಣೆಗಳನ್ನು ನಡೆಸಿದ್ದು, ಒಟ್ಟು 12 ಬಾಲಕಾರ್ಮಿಕರನ್ನು ಪತ್ತೆ ಮಾಡಿ, ಪುನರ್ ವಸತಿಗೊಳಿಸಲಾಗಿದೆ. 8 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ. ಬಾಲ ಮತ್ತು ಕಿಶೋರ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ 20 ಸಾವಿರ ರು. ಗಳಿಂದ 50 ಸಾವಿರ ರು. ವರೆಗೂ ದಂಡ ಹಾಗೂ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಮಕ್ಕಳ ಸಹಾಯವಾಣಿ 1098, ಕಾರ್ಮಿಕರ ಸಹಾಯವಾಣಿ 155214 ಅಥವಾ ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿ ಅನಿಲ್ ಕುಮಾರ್ ಬಗಟೆ ತಿಳಿಸಿದರು.ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಗೂ, ಹಾಜರಾತಿ ಸಂಖ್ಯೆಗೂ ಬಹಳಷ್ಟು ವ್ಯೆತ್ಯಾಸ ಇರುವುದು ಕಂಡುಬಂದಿದ್ದು, ಈ ಕುರಿತಂತೆ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಮನ್ವಯ ಮಾಡಿಕೊಂಡು, ಈ ಮಕ್ಕಳು ದುಡಿಮೆಗೆ ಹೋಗುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕು. ಬಾಲಕಾರ್ಮಿಕ ಪದ್ಧತಿಗೆ ಮಕ್ಕಳ ಒಳಗಾದಲ್ಲಿ ಅವರ ಕಲಿಕಾ ಸಾಮರ್ಥ್ಯ ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಇಂತಹ ಮಕ್ಕಳನ್ನು ಶಿಕ್ಷಣದ ದಾರಿಗೆ ತರದೇ ಹೋದಲ್ಲಿ, ಎಸ್‍ಎಸ್‍ಎಲ್‍ಸಿ, ಪಿಯುಸಿ ಸೇರಿದಂತೆ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೈಗೊಳ್ಳುವ ಯಾವುದೇ ಕ್ರಮಗಳೂ ಶೇ. 100 ರಷ್ಟು ಯಶಸ್ವಿಯಾಗುವುದು ಕಷ್ಟಸಾಧ್ಯ. ಇದು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಮಿಕ ನಿರೀಕ್ಷಕರು, ಆರೋಗ್ಯ, ಕಾರ್ಮಿಕ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.