ಹಳಿಯಾಳ: ಪ್ರಚಲಿತ ದಿನಮಾಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ಷೇತ್ರದಲ್ಲಿ ತರಬೇತಿ ಪಡೆದ ಯುವಕರಿಗೆ ಉತ್ತಮ ಅವಕಾಶಗಳಿವೆ ಎಂದು ಕಾರವಾರದ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಸುಶೀಲ ನಾಯಕ್ ಹೇಳಿದರು.
ಗ್ರಾಮೀಣ ಯುವಕರಿಗೆ ಹೊಸ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ನಬಾರ್ಡ್ ಈ ತರಬೇತಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದೆ. ತರಬೇತಿದಾರರು ಪಡೆದ ಕೌಶಲ್ಯವನ್ನು ಸ್ವ- ಉದ್ಯೋಗವಾಗಿ ಪರಿವರ್ತಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಇವಿ ತಂತ್ರಜ್ಞಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಮುಸೇಬ್ ಇಟಂಗಿವಾಲೇ ಮಾತನಾಡಿ, ಇವಿ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ತರಬೇತಿ ಪಡೆದ ಮೆಕ್ಯಾನಿಕ್‌ಗಳಿಗೆ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಉತ್ತಮ ಅವಕಾಶಗಳಿವೆ. ಗುಣಮಟ್ಟದ ಸೇವೆ ಹಾಗೂ ಪ್ರಾಯೋಗಿಕ ಕೌಶಲ್ಯದ ಮೂಲಕ ಸ್ವಂತ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಕಿರಣಕುಮಾರ ಬಗಾಡೆ ಅವರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತರಬೇತಿದಾರರನ್ನು ಅಭಿನಂದಿಸಿ, ಸಂಸ್ಥೆಯ ಉದ್ದೇಶ ಕೇವಲ ತರಬೇತಿ ನೀಡುವುದಲ್ಲದೆ, ತರಬೇತಿದಾರರನ್ನು ಸುಸ್ಥಿರ ಉದ್ಯೋಗ ಮತ್ತು ಸ್ವ- ಉದ್ಯೋಗದತ್ತ ಮುನ್ನಡೆಸುವುದಾಗಿದೆ ಎಂದರು.ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಪ್ರಸ್ತಾವಿಕವಾಗಿ ಮಾತನಾಡಿ, ತರಬೇತಿ ಶಿಬಿರದ ಮಾಹಿತಿ ನೀಡಿ, ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ತರಬೇತಿ ಪಡೆದ ಇವಿ ಮೆಕ್ಯಾನಿಕ್‌ಗಳಿಗೆ ಉತ್ತಮ ಭವಿಷ್ಯವಿದೆ. ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರದ ಜತೆ ಟೂಲ್- ಕಿಟ್‌ಗಳನ್ನು ನೀಡಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು. ಸಮಾರಂಭದಲ್ಲಿ 25 ತರಬೇತಿದಾರರಿಗೆ ತರಬೇತಿ ಪ್ರಮಾಣಪತ್ರ ಹಾಗೂ ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು. ತರಬೇತಿ ಸಂಯೋಜಕ ಶ್ರೀಶೈಲ ಅಥಣಿ ಕಾರ್ಯಕ್ರಮ ನಿರೂಪಿಸಿದರು.