ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಶ್ರೀ ಮಾಚಿದೇವ ಮಡಿವಾಳರ ಸಂಘ ಏರ್ಪಡಿಸಿದ್ದ ಮಡಿವಾಳ ಶ್ರೀ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಶೋಷಿತ ಸಮಾಜ ಯಾವುದಾದರೂ ಇದೆಯೆಂದರೆ ಅದು ಮಡಿವಾಳ ಸಮಾಜ ಮಾತ್ರ. ಈ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಹೇಳಿದರು. ಮಾಗಡಿ ತಾಲೂಕಿನಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಬಟ್ಟೆಗಳನ್ನು ತೊಳೆದು, ಇಸ್ತ್ರಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಧೋಬಿಘಾಟ್ ಇಲ್ಲದಿರುವುದು ಬೇಸರದ ಸಂಗತಿ, ಧೋಬಿಘಾಟ್ ನಿರ್ಮಿಸಿಕೊಳ್ಳಲು ಸರ್ಕಾರಿ ಜಾಗ ನೀಡುವಂತೆ ಮನವಿ ಮಾಡಿದ್ದೀರಿ, ನಿಮ್ಮ ಮನವಿಯನ್ನು ಸ್ವೀಕರಿಸಿದ್ದು, ಧೋಬಿಘಾಟ್ ಗಾಗಿ ಕಂದಾಯ ಭೂಮಿಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಸುರೇಂದ್ರ ಮೂರ್ತಿ ತಿಳಿಸಿದರು.
ಸಂಘದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್ ಮಾತನಾಡಿ, ಹಿಂದುಳಿದ ಮಡಿವಾಳ ಸಮಾಜವನ್ನು ಸರ್ಕಾರ ಎಸ್ಸಿಗೆ ಸೇರಿಸಲು ಅನ್ನಪೂರ್ಣಮ್ಮ ವರದಿಯನ್ನು ಜಾರಿಗೊಳಿಸಬೇಕು. ಈ ಸಮುದಾಯದವರು ಅತ್ಯಂತ ಬಡವರಾಗಿದ್ದು, ಅವರಿಗೆ ಸರ್ಕಾರ ಸೂಕ್ತ ನಿವೇಶನ ನೀಡಿ ಧೋಬಿಘಾಟ್ ಸಹ ನಿರ್ಮಿಸಿಕೊಡಬೇಕು. ಸಮುದಾಯದ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕವಾಗಿದ್ದು, ಮಡಿವಾಳ ಸಮುದಾಯವನ್ನು ಪ.ಜಾತಿಗೆ ಸೇರಿಸಿದರೆ ಸರ್ಕಾರದ ಸವಲತ್ತುಗಳು ಲಭ್ಯವಾಗುತ್ತವೆ ಎಂದು ಹೇಳಿದರು.ನಿವೃತ್ತ ವಾಯುಸೇನೆ ಅಧಿಕಾರಿ ಎಚ್.ಎನ್.ಶಿವಲಿಂಗಯ್ಯ ಮಾತನಾಡಿ, ಮಾಚೀದೇವರ ಹೆಸರಿನಲ್ಲಿ ಸರ್ಕಾರ ಶೌರ್ಯ ಪ್ರಶಸ್ತಿ ನೀಡಲು ಪ್ರಾರಂಭಿಸಲಿ, ಮಾಚಿದೇವ ಶರಣರ ರಕ್ಷಣೆ ಇಲ್ಲದಿದ್ದರೆ ಬಹುತೇಕ ಶರಣರ ಮಾರಣ ಹೋಮವಾಗುತ್ತಿತ್ತು ಹಾಗೂ ವಚನ ಸಾಹಿತ್ಯವು ಬೆಂಕಿಗೆ ಆಹುತಿಯಾಗುತ್ತಿತ್ತು. ಶರಣರ ಪ್ರಾಣ ಮತ್ತು ಅಮೂಲ್ಯಸಾಹಿತ್ಯವನ್ನು ರಕ್ಷಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪಿ.ರಾಜು ಮಾತನಾಡಿದರು. ಸರ್ವಶ್ರೇಷ್ಠ ಶರಣ ವೀರಗಣಾಚಾರಿ ಮಡಿವಾಳ ಶ್ರೀ ಮಾಚಿದೇವರಿಗೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಪ್ರಧಾನ ಕಾರ್ಯದರ್ಶಿ ಹರೀಶ್ ಪ್ರಸ್ತಾವಿಕ ಮಾತನಾಡಿದರು.ರೈತ ಸಂಘದ ದಿನೇಶ್, ನಮ್ಮ ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ಎನ್.ರಾಜಣ್ಣ, ಮಹಾದೇವಪ್ಪ,ಸಂಘದ ಗೌರವಾಧ್ಯಕ್ಷ ಮಹಾಲಿಂಗಪ್ಪ, ರಾಜಣ್ಣ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ತಿರುಮಲೆ ರಂಗನಾಥ್, ಗಿರೀಶ್ ಇತರರಿದ್ದರು.
---------