ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ರೈತನಿಗೆ ಅವಮಾನ ಖಂಡಿಸಿ ಪೊರಕೆ ಚಳವಳಿ

KannadaprabhaNewsNetwork |  
Published : Jul 18, 2024, 01:36 AM IST
11 | Kannada Prabha

ಸಾರಾಂಶ

ಬೆಂಗಳೂರಿನ ಜಿಟಿ ಮಾಲ್‌ಗೆ ಪಂಚೆ ಧರಿಸಿ ತೆರಳಿದ್ದ ರೈತನಿಗೆ ಪ್ರವೇಶ ನೀಡದೆ ಅಪಮಾನ ಮಾಡಲಾಗಿದೆ. ಇದು ಇಡೀ ರೈತ ವರ್ಗಕ್ಕೆ ಮಾಡಿದ ಅಪಮಾನ. ರೈತ ದೇಶದ ಬೆನ್ನೆಲುಬು. ಬಹು ಸಂಖ್ಯಾತ ವರ್ಗವನ್ನು ಹೊಂದಿರುವ ಈ ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ಪಂಚೆ ಹಾಕಿಕೊಂಡು ಬಂದರೆ ಮಾಲ್ ಒಳಗೆ ಪ್ರವೇಶವಿಲ್ಲ ಎನ್ನುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ರೈತನಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪೊರಕೆ ಚಳವಳಿ ನಡೆಸಲಾಯಿತು.

ಬೆಂಗಳೂರಿನ ಜಿಟಿ ಮಾಲ್‌ಗೆ ಪಂಚೆ ಧರಿಸಿ ತೆರಳಿದ್ದ ರೈತನಿಗೆ ಪ್ರವೇಶ ನೀಡದೆ ಅಪಮಾನ ಮಾಡಲಾಗಿದೆ. ಇದು ಇಡೀ ರೈತ ವರ್ಗಕ್ಕೆ ಮಾಡಿದ ಅಪಮಾನ. ರೈತ ದೇಶದ ಬೆನ್ನೆಲುಬು. ಬಹು ಸಂಖ್ಯಾತ ವರ್ಗವನ್ನು ಹೊಂದಿರುವ ಈ ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ಪಂಚೆ ಹಾಕಿಕೊಂಡು ಬಂದರೆ ಮಾಲ್ ಒಳಗೆ ಪ್ರವೇಶವಿಲ್ಲ ಎನ್ನುವುದು ಖಂಡನೀಯ. ಪಂಚೆ ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸುವ ಪ್ರಧಾನ ಮಂತ್ರಿಯಿಂದ, ಮುಖ್ಯಮಂತ್ರಿ, ಶಾಸಕ, ಸಂಸದರಿಗೂ ಅಪಮಾನ ಮಾಡಿದಂತೆ ಎಂದು ಕಿಡಿಕಾರಿದರು.

ಬಂಡವಾಳ ಶಾಹಿಗಳು, ರಾಜಕಾರಣಿಗಳು ಪಂಚೆ ಹಾಕಿಕೊಂಡು ಬಂದರೆ ಯಾವುದೇ ಚಕಾರ ಎತ್ತದ ಮಾಲ್ ಗಳು ರೈತರ ಬಗ್ಗೆ ಈ ರೀತಿಯ ವರ್ತನೆ ತೋರುವುದು ಸರಿಯಲ್ಲ. ಹಣ್ಣು, ತರಕಾರಿ, ಹಾಲು, ಮೊಟ್ಟೆ ಸೇರಿದಂತೆ ರೈತರ ಹಲವು ಉತ್ಪನ್ನಗಳಿಂದ ಲಾಭ ಮಾಡಿಕೊಳ್ಳುವ ಮಾಲ್‌ಗಳು ಅದೇ ರೈತನಿಗೆ ಮಾಲ್‌ಗೆ ಪ್ರವೇಶವಿಲ್ಲ ಎಂದು ಗೂಂಡಾ ವರ್ತನೆ ತೋರುತ್ತವೆ. ಕೂಡಲೇ ಸರ್ಕಾರ ಇಂತಹ ಮಾಲ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ರೈತರಿಗೆ ಅಪಮಾನ ಮಾಡುವ ಸಂಸ್ಥೆ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ಅತ್ತಳ್ಳಿ ಸೌಮ್ಯರಾಜ್, ಹಾಡ್ಯ ರವಿ, ಹಾಲಿನ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಅರಳಿಕಟ್ಟೆ ಕುಮಾರ್, ಉಡಿಗಾಲ ರಾಜಶೇಖರಪ್ಪ, ಗುರುವಿನಪುರ ಮೋಹನ್, ಆನಂದ, ಮಲೆಮಾದಪ್ಪ, ಕಸುನಹಳ್ಳಿ ಮಂಜೇಶ್, ದೇವನೂರು ನಾಗೇಂದ್ರ, ಹೊಸಪುರ ಮಾದಪ್ಪ, ಅಂಡುವಿನಹಳ್ಳಿ ಜಗದೀಶ್, ಮುದ್ದಳ್ಳಿ ಚಿಕ್ಕಸ್ವಾಮಿ, ರೇವಣ್ಣ, ಕುಮಾರ್, ಗಣೇಶ್, ಸಿದ್ದಲಿಂಗು, ಸುರೇಶ್, ಮಹೇಶ್ ಮೊದಲಾದವರು ಇದ್ದರು.

ರೈತನಿಗೆ ಅಪಮಾನ- ಕುರುಬೂರು ಶಾಂತಕುಮಾರ್ ಖಂಡನೆಬೆಂಗಳೂರು ಜಿಟಿ ಮಾಲ್‌ನಲ್ಲಿ ಪಂಚೆಯಲ್ಲಿ ಬಂದ ರೈತನಿಗೆ ಪ್ರವೇಶ ಕೊಡದೆ ರೈತನಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ರೈತರ ಅನ್ನ ತಿನ್ನುವ ಯಾರೇ ಆದರೂ ಇನ್ನು ಮುಂದೆ ಇಂಥ ನಡವಳಿಕೆ ತೋರಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆಯಲ್ಲಿ ಬರುತ್ತಾರೆ ಅವರಿಗೂ ಪ್ರವೇಶ ನೀಡದೆ ನಿಲ್ಲಿಸುತ್ತಾರೆಯೇ. ಇದು ರಾಜ್ಯದ ರೈತರಿಗೆ ಮಾಡಿದ ಅಪಮಾನ.

ರೈತನ ಅನ್ನ ತಿನ್ನುವ ರೈತ ಬೆಳೆದ ಹಣ್ಣು ತರಕಾರಿ ಧಾನ್ಯಗಳನ್ನು ಬೆಳೆಯನ್ನು ಮಾರಾಟ ಮಾಡುವ ಈ ಮಾಲ್ ಮಾಲೀಕ ಕೂಡಲೇ ಕ್ಷಮೆಯಾಚಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ, ಸಾವಿರಾರು ರೈತರು ಬಾರ್ ಕೋಲ್ ಗಳೊಂದಿಗೆ ಚಡ್ಡಿಯಲ್ಲಿ ಮೆರವಣಿಗೆ ಮೂಲಕ ಮಾಲ್ ಗೆ ಪ್ರವೇಶಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ