ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ಕೇಂದ್ರ ಸರ್ಕಾರ ವಿಸ್ತೃತ ಪ್ರತಿಕ್ರಿಯೆ ನೀಡಿದ್ದು, ದೇಶಾದ್ಯಂತ ಒಂದು ಲಕ್ಷ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4ಜಿ ಸೈಟ್‌ಗಳನ್ನು ಬಿಎಸ್‌ಎನ್‌ಎಲ್ ಅಳವಡಿಸುತ್ತಿದೆ ಎಂದು ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ಆತ್ಮನಿರ್ಭರ ಭಾರತ’ ಉಪಕ್ರಮದ ಭಾಗವಾಗಿರುವ ಈ ಯೋಜನೆ, ಕರ್ನಾಟಕಕ್ಕೆ ಕೂಡ ವಿಶೇಷ ಮಹತ್ವದ್ದಾಗಿದೆ. ಏಕೆಂದರೆ ದುರ್ಗಮ ಪ್ರದೇಶ, ಬೆಟ್ಟಗುಡ್ಡಗಳು, ದಟ್ಟ ಅರಣ್ಯ ಮತ್ತು ದೂರದ ಹಳ್ಳಿಗಳನ್ನು ಹೊಂದಿರುವ ರಾಜ್ಯವಾಗಿದ್ದು, ದಶಕಗಳಿಂದ ತೀರಾ ವಿರಳ ಅಥವಾ ಮೊಬೈಲ್ ಸಂಪರ್ಕವೇ ಇಲ್ಲದ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳಿಗೆ ಇದರಿಂದ ಸಂವಹನ ಕ್ಷೇತ್ರದಲ್ಲಿ ಪರಿವರ್ತನೆ ಸಾಧ್ಯವಾಗಲಿದೆ. ಮತ್ತೊಂದು ವಿಶೇಷವೆಂದರೆ, ಅಳವಡಿಸಲಾಗುತ್ತಿರುವ ಪ್ರತಿಯೊಂದು ಟವರ್ ಕೂಡ 5ಜಿ-ಸಿದ್ಧವಾಗಿದೆ. ಅಂದರೆ ಭಾರತ ತನ್ನ ಮುಂದಿನ ತಾಂತ್ರಿಕ ಹೆಜ್ಜೆ ಇಟ್ಟಾಗ ಕರ್ನಾಟಕದ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳು ಕೂಡ ಸಂವಹನ ನೆಟ್ ವರ್ಕ್ ವ್ಯಾಪ್ತಿಗೆ ಒಳಪಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.ಅನೇಕ ವರ್ಷಗಳಿಂದ, ನಮ್ಮ ಕರ್ನಾಟಕದ ಮತ್ತು ನಮ್ಮ ಶಿವಮೊಗ್ಗ ಕ್ಷೇತ್ರದ ಗ್ರಾಮೀಣ ಭಾಗದ ಮತ್ತು ಗುಡ್ಡಗಾಡು ಪ್ರದೇಶಗಳ ಜನರು, ಉತ್ತಮ ಸಂಪರ್ಕಕ್ಕಾಗಿ ಕಾಯುತ್ತಿದ್ದರು. ಈಗ ಕೇಂದ್ರದ ಮೋದಿ ಸರ್ಕಾರ ದೇಶಾದ್ಯಂತ, ಸುಮಾರು ಒಂದು ಲಕ್ಷ ಸ್ಥಳಗಳಲ್ಲಿ ನಮ್ಮ ಆತ್ಮನಿರ್ಭರ್ 4ಜಿ ಟವರ್‌ಗಳನ್ನು ಸ್ಥಾಪಿಸುವುದರೊಂದಿಗೆ, ಕಾಯುವಿಕೆ ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್‌ನ ಎಫ್‌ಟಿಟಿಎಚ್ ಬ್ರಾಡ್‌ಬ್ಯಾಂಡ್ ಆದಾಯವು 2022-23ರಲ್ಲಿ 2,071 ಕೋಟಿ ರು.ನಿಂದ 2024-25ರಲ್ಲಿ 2,923 ಕೋಟಿ ರು.ಗಳಿಗೆ ಸ್ಥಿರವಾಗಿ ಬೆಳೆದಿದ್ದು, ಇದು ವಾಸ್ತವ ಪ್ರಗತಿಯನ್ನು ಪ್ರತಿಬಿಂಬಿಸುತ್ತಿದೆ. ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಕ್ಷೇತ್ರದಲ್ಲಿ, ಹಿಂದುಳಿದ ಪ್ರದೇಶಗಳಿಗೆ ಉತ್ತಮ ದೂರಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ರಾಘವೇಂದ್ರ ಸಕ್ರಿಯವಾಗಿದ್ದು, ಇದೀಗ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯಿಂದ, ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಅನುಗುಣವಾಗಿ ಇಲ್ಲಿಯೇ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ಅಳವಡಿಸಲಾಗುತ್ತಿರುವ ಭಾರತೀಯ ತಂತ್ರಜ್ಞಾನ, ದೇಶದ ಡಿಜಿಟಲ್ ಭವಿಷ್ಯಕ್ಕೆ ಶಕ್ತಿ ತುಂಬುತ್ತಿದೆ ಎಂದು ತಿಳಿಸಿದ್ದಾರೆ.