ವಚನ ಸಾಹಿತ್ಯ ಮೂಲಕ ಸುಸ್ಥಿರ ಸಮಾಜ ನಿರ್ಮಾಣ

KannadaprabhaNewsNetwork |  
Published : May 12, 2024, 01:23 AM IST
೧೦ಕೆಕೆಆರ್1: ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಜಯಂತ್ರೋತ್ಸವವನ್ನು ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಶುಕ್ರವಾರ ಉದ್ಘಾಟಿಸಿದರು. ಶಾಸಕ ಬಸವರಾಜ ರಾಯರಡ್ಡಿ, ರಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಜೆಡಿಎಸ್ ರಾಜ್ಯ ಕೋರಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಇದ್ದರು. | Kannada Prabha

ಸಾರಾಂಶ

ಬಸವಣ್ಣನವರು ವಚನ ಸಾಹಿತ್ಯ ಮೂಲಕ ಸುಸ್ಥಿರ ಸಮಸಮಾಜ ನಿರ್ಮಾಣಕ್ಕೆ ಮುಂದಾದರು. ಅನುಭವ ಮಂಟಪ ಕಟ್ಟುವ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದರು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.

ಕುಕನೂರು: ೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಸುಸ್ಥಿರ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಪಟ್ಟರು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶರಣ, ಶರಣೆಯರ ಜಯಂತಿಗಳು ಒಟ್ಟಿಗೆ ಬಂದಿದ್ದು, ವಿಶ್ವಗುರು ಬಸವಣ್ಣ ಹಾಗೂ ಹೇಮರಡ್ಡಿ ಮಲ್ಲಮ್ಮನ ಜಯಂತಿ ಒಂದೇ ದಿನ ಆಚರಣೆಯಾಗುತ್ತಿದೆ ಎಂದರು.

ಬಸಣ್ಣನವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದ್ದರು. ಜನಿವಾರವನ್ನು ಯಾಕೆ ಹಾಕಬೇಕು ಎಂದು ಹಿರಿಯರಿಗೆ ಪ್ರಶ್ನೆ ಮಾಡಿ, ಧಿಕ್ಕರಿಸಿದವರು. ಲಿಂಗಾಯತ ಸಮಾಜದ ಆಚಾರ, ವಿಚಾರ ನೋಡಿ, ವಚನ ಸಾಹಿತ್ಯ ಮೂಲಕ ಸುಸ್ಥಿರ ಸಮಸಮಾಜ ನಿರ್ಮಾಣಕ್ಕೆ ಮುಂದಾದರು. ಅಣ್ಣ ಬಸವಣ್ಣ ಎನ್ನುವ ಖ್ಯಾತಿ ಪಡೆದು, ಅನುಭವ ಮಂಟಪ ಕಟ್ಟುವ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದರು. ಕಾಯಕ ಸಮಾಜಕ್ಕೆ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.

ವೀರಶೈವ ಲಿಂಗಾಯತ ಕೊಡುಗೆ ಅಪಾರವಾಗಿದ್ದು, ಅದರಲ್ಲೂ ಮಠಗಳು ದಾಸೋಹ, ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ ನೀಡಿವೆ. ಬಸವಣ್ಣನವರು ೮೦೦ ವರ್ಷಗಳ ಹಿಂದೆ ಸ್ತ್ರೀಯರಿಗೆ ಸಮಾನ ಹಕ್ಕು ನೀಡಿದ್ದಾರೆ. ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ತಾಯಿ ಒಂದು ಮನೆಯನ್ನು ಸುಧಾರಣೆ ಮಾಡಿದರೆ ಸುತ್ತಮುತ್ತ ಇರುವ ಮನೆತನಗಳು ಕೂಡ ಸುಧಾರಣೆಯಾಗುತ್ತವೆ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯ ಸರ್ಕಾರದಿಂದ ವಿಶ್ವಬಸವ ಜಯಂತಿ ಆಚರಿಸಲಾಗುತ್ತಿದೆ. ಮನುಶಾಸ್ತ್ರ ಪುರುಷ ಪ್ರಧಾನ, ಶ್ರೀಮಂತರು ಹಾಗೂ ಮೌಢ್ಯ ಬೆಳೆಸುತ್ತಾ ಬಂದಿತ್ತು. ಧರ್ಮದ ಹೆಸರಿನಲ್ಲಿ ಜಾತಿ ಶ್ರೇಣಿ ಮಾಡಿದರು. ಶ್ರೇಣಿಕೃತ ಸಮಾಜ ನಿರ್ಮಾಣ ಮಾಡಿ, ಮನುಷ್ಯರನ್ನು ಪ್ರಾಣಿಕ್ಕಿಂತಲೂ ಕೀಳಾಗಿ ಕಾಣಲಾಗುತ್ತಿತ್ತು. ಕೆಳವರ್ಗ ಹೆಣ್ಣು ಮಕ್ಕಳು ಪೂಜೆ ಮಾಡುವಂತಿರಲಿಲ್ಲ. ೧೨ನೇ ಶತಮಾನದಲ್ಲಿ ಬಸವಣ್ಣನವರು ಇಂತಹ ಸಮಾಜದಿಂದ ಹೊರ ಬರಬೇಕು ಎನ್ನುವ ಉದ್ದೇಶದಿಂದ ಸಮಸಮಾಜ ನಿರ್ಮಾಣಕ್ಕೆ ಮುಂದಾದರು ಎಂದು ಹೇಳಿದರು.

ದೇವಸ್ಥಾನದಲ್ಲಿ ಮೋದಿ, ಅಂಬಾನಿ, ಶ್ರೀಮಂತರಿಗೆ ನೇರವಾಗಿ ಬಿಡುತ್ತಾರೆ. ನಾನು ಹಾಗೂ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಹೋಗಲ್ಲ. ನನಗೆ ಜಾತಿ, ಧರ್ಮ ಇಲ್ಲ. ಈ ಹಿಂದೆ ಶ್ರೀಶೈಲ ಮಲ್ಲಿಕಾರ್ಜುನಕ್ಕೆ ಆಹ್ವಾನ ಬಂದಾಗ ಹೋಗಿದ್ದೆ. ಆದರೆ ದೇವಸ್ಥಾನಕ್ಕೆ ಹೋದರೆ ಅಲ್ಲಿನ ಇತಿಹಾಸ ತಿಳಿದುಕೊಳ್ಳಲು ಮುಂದಾಗುತ್ತೇನೆ ಎಂದರು.

ರಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಜೆಡಿಎಸ್ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಜಿಪಂ ಮಾಜಿ ಸದಸ್ಯೆ ಗಂಗಮ್ಮ ಗುಳ್ಳಗಣ್ಣನವರ, ಪ್ರಮುಖರಾದ ಮಂಜುಳಾ ಕರಡಿ ಮಾತನಾಡಿದರು. ಹೆಬಸೂರು-ಕಿರೇಸೂರ ವೇಮನ ಚೌರಡ್ಡಿ ಉಪನ್ಯಾಸ ನೀಡಿದರು. ಅರಳಿಹಳ್ಳಿ ರಾಜರಾಜೇಶ್ವರಿ ಮಠದ ಗವಿಸಿದ್ದಯ್ಯ ತಾತನವರು, ದದೇಗಲ್ ಆತ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.

ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಸಂಗಪ್ಪ ವಕ್ಕಳದ ಅಧ್ಯಕ್ಷತೆ ವಹಿಸಿದರು. ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಕೊಪ್ಪಳ ರಡ್ಡಿ ಸಮಾಜದ ಅಧ್ಯಕ್ಷ ಪ್ರಭು ಹೆಬ್ಬಾಳ, ಗಂಗಾವತಿ ಆರ್.ಪಿ. ರಡ್ಡಿ, ಗ್ರಾಪಂ ಸದಸ್ಯ ತಿಮ್ಮಣ್ಣ ಚವಡಿ, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಗಂಗಮ್ಮ ಗಡಗಿ, ಮಮತಾ ರಾಯರಡ್ಡಿ, ಶಂಕರಗೌಡ ಹಿರೇಗೌಡರ,, ದೇವಪ್ಪ ಅರಕೇರಿ, ಗ್ರಾಪಂ ಅಧ್ಯಕ್ಷೆ ಜಾಹೀರಾ ಬೇಗಂ ಇತರರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''