ಕಸಾಪಗೆ ಕೆಲಸ ಮಾಡುವವರು ಬೇಕು, ಟೀಕಿಸುವರು ಬೇಕಿಲ್ಲ

KannadaprabhaNewsNetwork | Published : Jan 19, 2024 1:45 AM

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ತಾಲೂಕು ಕಸಾಪ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದ್ದು ಹೀಗೆ...

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜಿಲ್ಲೆಯ 6 ತಾಲೂಕುಗಳಲ್ಲಿ ತಾಲೂಕು ಅಧ್ಯಕ್ಷರು ಕಳೆದ ಒಂದು ವರ್ಷದಿಂದ ಸಾಹಿತ್ಯ ಚಟುವಟಿಕೆಗಳನ್ನು ಮಾಡದ ಕಾರಣದಿಂದಾಗಿ ಅವರನ್ನು ಬದಲಾಯಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.

ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ತಾಲೂಕು ಕಸಾಪ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ಗೆ ಕೆಲಸ ಮಾಡುವವರು ಬೇಕು, ಟೀಕೆ ಮಾಡುವವರು ಬೇಕಿಲ್ಲ. ಪರಿಷತ್‌ನಿಂದ ದಂಪತಿ ಸಮ್ಮೇತರಾಗಿ ಸನ್ಮಾನ ಸ್ವೀಕರಿಸಿಕೊಂಡು ಟೀಕೆ ಮಾಡುವುದು ಏಷ್ಟು ಸರಿ?. ಟೀಕೆ ಮಾಡುವವರು ವೇದಿಕೆ ಬನ್ನಿ ಎಂದು ಸವಾಲ ಹಾಕಿದರು.

ಕನ್ನಡ ಸಾಹಿತ್ಯ ಪರಿಷತ್‌ ಗ್ರಾಮಗಳಿಗೆ ಹೋಗಬೇಕೆಂಬ ಉದ್ದೇಶದಿಂದ ನಾನು ಅಧ್ಯಕ್ಷನಾದ ನಂತರ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲ ಭಾಗದಲ್ಲಿಯೂ ನಿರಂತರವಾಗಿ ಕನ್ನಡ ಸಾಹಿತ್ಯ ಚಟುವಟಿಕೆಗಳು ನಡೆಯುವಂತೆ ಮಾಡಿದ ತೃಪ್ತಿಯಿದೆ. ನಮ್ಮ ಚಟುವಟಿಕೆಗಳು ರಾಜ್ಯಮಟ್ಟಕ್ಕೆ ಮುಟ್ಟಿವೆ. ಪರಿಷತ್‌ನಿಂದ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಅನೇಕ ಪೂಜ್ಯರು ಭಾಗವಹಿಸುವ ಮೂಲಕ ಪರಿಷತ್‌ಗೆ ಆಶೀರ್ವಾದ ಮಾಡಿದ್ದಾರೆ. ಜಿಲ್ಲೆಯಲ್ಲಿ ೧೦ ಸಾವಿರ ಪರಿಷತ್‌ನ ಸದಸ್ಯರಿದ್ದಾರೆ. ಎಲ್ಲರಿಗೂ ಅವಕಾಶ ಕಲ್ಪಿಸುವ ಸಂಕಲ್ಪ ನನ್ನದು. ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಮಮತೆ, ಪ್ರೀತಿ ಬೇಕಿದೆ. ₹೬.೫೦ ಕೋಟಿ ವೆಚ್ಚದಲ್ಲಿ ಭವ್ಯವಾದ ಕನ್ನಡ ಸಾಹಿತ್ಯ ಪರಿಷತ್‌ನ ಭವನ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದು, ಈ ಭವನ ನಿರ್ಮಾಣ ಕಾರ್ಯ ಎಲ್ಲರ ಸಹಕಾರದೊಂದಿಗೆ ಮುಗಿಸುತ್ತೇನೆ. ನಾನು ಕನ್ನಡ ಸೇವಕನಾಗಿ ನಿರಂತರವಾಗಿ ಕಾರ್ಯ ಮಾಡಲು ಬದ್ಧ ಎಂದು ಭರವಸೆ ನೀಡಿದರು.

ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನವನ್ನು ಪರಿವರ್ತಿಸುವ ಶಕ್ತಿ ಕನ್ನಡ ಸಾಹಿತ್ಯಕ್ಕೆ ಇದೆ. ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಸಾಹಿತ್ಯದಲ್ಲಿ ಕಾಣುತ್ತೇವೆ. ಎರಡು ಸಾವಿರ ವರ್ಷ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಗೆ ಸದೃಢಗೊಳಿಸುವ ಶಕ್ತಿ ಇದೆ. ನಮ್ಮ ರಾಜ್ಯದಲ್ಲಿ ವಿವಿಧೆತೆಯನ್ನು ಕಾಣಬಹುದು. ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನಗಳ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಸದೃಢಗೊಳಿಸಿದ್ದಾರೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಬಸವನಬಾಗೇವಾಡಿ ವಿಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ನಿತ್ಯ ಜೀವನದಲ್ಲಿ ನಾವು ಅನೇಕ ಆಂಗ್ಲ ಶಬ್ದಗಳನ್ನು ಬಳಕೆ ಮಾಡುತ್ತೇವೆ. ಕನ್ನಡ ಶಿಶುಗೀತೆಗಳನ್ನು ಮಕ್ಕಳಿಗೆ ಹಾಡಿಸಿದರೇ ಅವರಿಗೆ ಅದರ ಕಲ್ಪನೆ ಬರುತ್ತದೆ. ಮಕ್ಕಳಿಗೆ ಅಂದವಾದ ಕನ್ನಡವನ್ನು ಕಲಿಸಬೇಕು. ಇಂದಿನ ಕಾಲದಲ್ಲಿ ಎಲ್ಲರೂ ಬೇಕು ಬೇಕು ಅನ್ನುವ ಕಾಲದಲ್ಲಿ ಎಲ್ಲವೂ ಬೇಡ ಬೇಡ ಅಂದವರು ಸಿದ್ಧೇಶ್ವರ ಸ್ವಾಮೀಜಿಯವರು. ಇಂತಹ ಪೂಜ್ಯರು ಎಲ್ಲಿಯೂ ನಾವು ನೋಡಿಲ್ಲ. ಇಂತಹ ಪೂಜ್ಯರನ್ನು ಕಳೆದುಕೊಂಡಿದ್ದು ಅಪಾರ ನಷ್ಟವಾಗಿದೆ. ತಮ್ಮ ಪ್ರವಚನಗಳ ಮೂಲಕ ನಮಗೆ ಜ್ಞಾನ ದಾಸೋಹ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕು ಕಸಾಪ ನೂತನ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿದರು. ಭಾಗ್ಯಶ್ರೀ ಪಾಟೀಲ, ಭಾಗ್ಯಶ್ರೀ ಹಿರೇಮಠ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದರು.

ಸಿದ್ದಲಿಂಗ ಸ್ವಾಮೀಜಿ. ಬೃಂಗೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಬಿಇಒ ವಸಂತ ರಾಠೋಡ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಚಂದ್ರಶೇಖರ ಮರೋಳ, ಚಂದ್ರಶೇಖರ ಮುಳವಾಡ, ಬಾಲು ರಾಠೋಡ, ಸಂಗಮೇಶ ಓಲೇಕಾರ, ಎಸ್.ಐ.ಬಿರಾದಾರ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಡಾ.ಸಂಗಮೇಶ ಮೇತ್ರಿ, ರಾಜೇಸಾಬ್‌ ಶಿವನಗುತ್ತಿ ಇತರರು ಇದ್ದರು. ಎಚ್.ಬಿ.ಬಾರಿಕಾಯಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಬಿ.ವಿ.ಚಕ್ರಮನಿ ವಂದಿಸಿದರು.

ತಡವಾಗಿ ಆರಂಭವಾದ ಕಾರ್ಯಕ್ರಮ:

ಸಂಜೆ 6 ಗಂಟೆಗೆ ಆರಂಭವಾಗಬೇಕಿದ್ದ ಈ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಆರಂಭವಾಗಿ ೧೧ ಗಂಟೆಯವರೆಗೆ ನಡೆಯಿತು. ತಾಲೂಕು ಕಸಾಪ ನೂತನ ಅಧ್ಯಕ್ಷ ಶಿವಾನಂದ ಡೋಣೂರ ಅವರು ತಮ್ಮ ಆಶಯ ಭಾಷಣದಲ್ಲಿ ಆಂಗ್ಲ ಪದಗಳ ಬಳಕೆ ಮಾಡುವ ಜೊತೆಗೆ ಆಹ್ವಾನ ಪತ್ರಿಕೆಯಲ್ಲಿದ್ದ ಕೆಲವರು ಬಾರದೇ ಇದ್ದರೂ ಎಲ್ಲರ ಹೆಸರು ಹೇಳುವ ಮೂಲಕ ಪ್ರೇಕ್ಷಕರಿಗೆ ಬೇಸರ ಮೂಡಿಸಿದರು. ಪದಾಧಿಕಾರಿಗಳ ಪದಗ್ರಹಣ ಸಂದರ್ಭದಲ್ಲಿ ಕೆಲ ಪದಾಧಿಕಾರಿಗಳು ಹಾಜರಾಗದೇ ಇರುವುದು ಕಂಡುಬಂದಿತ್ತು.ಕನ್ನಡ ಸಾಹಿತ್ಯ ಪರಿಷತ್ತಿನ ಹುದ್ದೆಗಳನ್ನು ಪಡೆದುಕೊಂಡ ನಂತರ ಸುಮ್ಮನೆ ಕುಳಿತುಕೊಳ್ಳದೇ ನಿರಂತರವಾಗಿ ಕನ್ನಡ ತಾಯಿ ಸೇವೆ ಮಾಡಬೇಕು.

-ಹಾಸಿಂಪೀರ ವಾಲೀಕಾರ, ಜಿಲ್ಲಾ ಕಸಾಪ ಅಧ್ಯಕ್ಷರು.

Share this article