ಶ್ರೀಮಂಗಲ ವ್ಯಾಪ್ತಿಯ ಅರಣ್ಯದ ಬೆಟ್ಟದ ಅಂಚಿನಲ್ಲಿ ಕ್ಯಾಮರಾ ಕಣ್ಗಾವಲು

KannadaprabhaNewsNetwork |  
Published : Oct 20, 2024, 01:48 AM IST
ಚಿತ್ರ : 19ಎಂಡಿಕೆ1 : ಶ್ರೀಮಂಗಲ ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ ಹುಲಿ ಹೆಜ್ಜೆ ಗುರುತು ಪರಿಶೀಲಿಸಿದ ಸಂಕೇತ್ ಪೂವಯ್ಯ | Kannada Prabha

ಸಾರಾಂಶ

ಹುಲಿ ಸೆರೆಗೆ ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿಯ ಸುಳಿವು ಪತ್ತೆಯಾಗಿಲ್ಲ. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್‌ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯ ದೇವನೂರು ಗ್ರಾಮದಲ್ಲಿ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಸೆರೆಗೆ ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿಯ ಸುಳಿವು ಪತ್ತೆಯಾಗಿಲ್ಲ.

ಅತ್ತ ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ಮತ್ತೆ ಗ್ರಾಮಕ್ಕೆ ನುಸುಳುವ ಸುಳಿವು ಅರಿಯಲು ಬ್ರಹ್ಮಗಿರಿ ಅರಣ್ಯದ ಬೆಟ್ಟದ ಅಂಚಿನಲ್ಲಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಉಭಯ ಸ್ಥಳಗಳಿಗೆ ಶನಿವಾರ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವನೂರು ವ್ಯಾಪ್ತಿಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಮೃಗಾಲಯ ಅಭಿಮನ್ಯು ಮತ್ತು ಅಶೋಕ ಎಂಬ ಎರಡು ಸಾಕಾನೆಗಳನ್ನು ಮತ್ತು 25ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಬಳಸಿಕೊಂಡು ಆನೆ ಚೌಕೂರು ವಲಯ ಅರಣ್ಯ ಅಧಿಕಾರಿ ದೇವರಾಜ್ ಅವರ ನೇತೃತ್ವದಲ್ಲಿ ಎರಡನೇ ದಿನದ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಕೂಂಬಿಂಗ್ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭ ಮಾತನಾಡಿದ ಅವರು, ಈಗಾಗಲೇ ಈ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾ ಟ್ರ್ಯಾಪ್ ನಲ್ಲಿ ಚಹರೆ ಪತ್ತೆಯಾಗಿದ್ದು, ಇದನ್ನು ನಾಗರಹೊಳೆ ‘‘ಯು 61 ಗಂಡು ಗ ಹುಲಿ”ಯೆಂದು ಗುರುತಿಸಲಾಗಿದೆ. ಹುಲಿಯ ಸುಳಿವು ದೊರೆಯುವವರೆಗೂ ಕಾರ್ಯಾಚರಣೆ ನಡೆಸಲಾಗುವುದು. ಮೊದಲ ಆದ್ಯತೆಯಾಗಿ ಅರಣ್ಯಕ್ಕೆ ಹುಲಿಯನ್ನು ಹಿಂತಿರುಗಿಸುವುದು ಹಾಗೂ ಕಾರ್ಯಾಚರಣೆಯ ಎರಡನೇ ಭಾಗವಾಗಿ ಹುಲಿಯನ್ನು ಬೋನು ಅಥವಾ ಅರವಳಿಕೆ ಮೂಲಕ ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿಸಿದರು.

ಬ್ರಹ್ಮಗಿರಿ ಅಭಯಾರಣ್ಯ ಅಂಚಿನಲ್ಲಿ ಕಾರ್ಯಾಚರಣೆ:

ಇದಲ್ಲದೆ ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪ ನೆಮ್ಮಲೆ ಗ್ರಾಮದಲ್ಲಿ ಹುಲಿ ಕಾರ್ಯಾಚರಣೆ ಸಂದರ್ಭ ಅರಣ್ಯಕ್ಕೆ ಹುಲಿ ಹಿಂದಿರುಗಿರುವ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿತ್ತು. ಹುಲಿಯ ಚಲನವಲನದ ಬಗ್ಗೆ ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ 20 ಹುಲಿ ಟ್ರ್ಯಾಪ್ ಕ್ಯಾಮರಗಳನ್ನು ಅರಣ್ಯ ಇಲಾಖೆ ಅಳವಡಿಸಿದೆ. ಇಲ್ಲಿಗೆ ಸಂಕೇತ್ ಪೂವಯ್ಯ ಅವರು ಖುದ್ದಾಗಿ ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸ್ಥಳದಲ್ಲಿ ಈಗಾಗಲೇ ಸುಮಾರು 20ಕ್ಕೂ ಅಧಿಕ ಸಿಬ್ಬಂದಿ ಅರಣ್ಯಕ್ಕೆ ಹಿಂತಿರುಗಿರುವ ಹುಲಿ ಮತ್ತೆ ಗ್ರಾಮಕ್ಕೆ ನುಸುಳುವ ಸಾಧ್ಯತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಹೆಜ್ಜೆ ಗುರುತು ಹಾಗೂ ಈ ವ್ಯಾಪ್ತಿಯಲ್ಲಿ ಅಳವಡಿಸಿರುವ 20 ಕ್ಯಾಮರಗಳನ್ನು ಪ್ರತಿನಿತ್ಯ ಪರಿಶೀಲನೆ ನಡೆಸುತ್ತಿದೆ. ಇದಲ್ಲದೆ ಬ್ರಹ್ಮಗಿರಿ ಅರಣ್ಯದಿಂದ ತೆರಾಲು ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಗ್ರಾಮಕ್ಕೆ ನುಸುಳುವ ಸಾಧ್ಯತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದು, ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ ಹದ್ದಿನ ಕಣ್ಣಿಟ್ಟು ಹುಲಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಶ್ರೀಮಂಗಲ ವ್ಯಾಪ್ತಿಯ ಬೀರುಗ ಗ್ರಾಮದ ಪಾಚಿಬೇಲ್ - ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ನೇತೃತ್ವವನ್ನು ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅರವಿಂದ್ ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಶ್ರೀಮಂಗಲ ವ್ಯಾಪ್ತಿಯ ಅರಣ್ಯದಂಚಿನಲ್ಲಿ ಕಾರ್ಯಾಚರಣೆಯಿಂದ ಹುಲಿ ಅರಣ್ಯಕ್ಕೆ ಹಿಂತಿರುಗಿರುವ ಹೆಜ್ಜೆ ಗುರುತನ್ನು ಪರಿಶೀಲಿಸಿದರು. ಇದಲ್ಲದೆ ಮತ್ತೆ ಹುಲಿ ಗ್ರಾಮಕ್ಕೆ ನುಸುಳಿರುವ ಯಾವುದೇ ಸುಳಿವು ಸಿಕ್ಕಿದರೂ, ಕೂಡಲೇ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಈ ಭಾಗದಲ್ಲಿಯೂ ಮತ್ತೆ ಆರಂಭಿಸಲಾಗುವುದು. ಅದಕ್ಕಾಗಿ ಈ ಭಾಗದ ಹುಲಿ ಸೆರೆಯ ಅನುಮತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ಸ್ಥಳೀಯ ಬೆಳೆಗಾರರಾದ ತೀತಿರ ಪ್ರಭು ಸುಬ್ಬಯ್ಯ, ಚೊಟ್ಟೆಯಾಡಮಾಡ ವಿಶು, ಚಿಮ್ಮುಣೀರ ವಸಂತ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ