ಏಕಕಾಲಕ್ಕೆ 1622 ಅಂಗನವಾಡಿ ಕೇಂದ್ರಗಳಲ್ಲಿ ಅತಿಸಾರ ಕೊನೆಗೊಳಿಸುವ ಅಭಿಯಾನ

KannadaprabhaNewsNetwork |  
Published : Jun 25, 2025, 11:47 PM IST
25ಡಿಡಬ್ಲೂಡಿ2ರಾಜೀವ ಗಾಂಧಿ ನಗರದ ಆತ್ಮಾನಂದ ಸಮುದಾಯ ಭವನದಲ್ಲಿ ಬುಧವಾರ ನಡೆದ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಮಕ್ಕಳಿಗೆ ಓಆರ್‌ಎಸ್‌ ಕುಡಿಸುವ ಮೂಲಕ ಚಾಲನೆ ನೀಡಿದರು.  | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ 1,622 ಅಂಗನವಾಡಿ ಕೇಂದ್ರಗಳಲ್ಲಿ ಜೂನ್‌ 16 ರಿಂದ 31ರ ವರೆಗೆ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದರ ಜತೆಗೆ ಪೌಷ್ಠಿಕ ಆಹಾರ ಅಭಿಯಾನದ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ.

ಧಾರವಾಡ: ಸೌಂದರ್ಯ ಉಳಿಸಿಕೊಳ್ಳಲು ಹಾಗೂ ಆಧುನಿಕ ಜೀವನ ಶೈಲಿ ಹಿನ್ನೆಲೆಯಲ್ಲಿ ಬಾಣಂತಿಯರು ಮಗುವಿಗೆ ಹಾಲುಣಿಸದೇ ಇರುವುದು ಸಲ್ಲ. ತಾಯಿ- ಮಗುವಿನ ಮಧ್ಯೆ ಅವಿನಾಭಾವ ಸಂಬಂಧ ಇದ್ದು, ಅದು ಓರ್ವ ತಾಯಿ ಮಗುವಿಗೆ ಹಾಲುಣಿಸುವ ಮೂಲಕ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಸಮೀಪದ ರಾಜೀವ ಗಾಂಧಿ ನಗರದ ಆತ್ಮಾನಂದ ಸಮುದಾಯ ಭವನದಲ್ಲಿ ಬುಧವಾರ ನಡೆದ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಉದ್ಘಾಟಿಸಿದ ಅವರು, ಪ್ರತಿಯೊಂದು ಮಗುವಿಗೆ ಎದೆ ಹಾಲು ಮಹತ್ವದ್ದಾಗಿದೆ. ತಾಯಂದಿರು ಮಗು ಜನಿಸಿದ ಕನಿಷ್ಠ ಆರು ತಿಂಗಳು ಎದೆ ಹಾಲು ಉಣಿಸಬೇಕು. ಎದೆ ಹಾಲಿಗೆ ಪರ‍್ಯಾಯ ಆಹಾರವಿಲ್ಲ. ಮಗುವಿನ ಜತೆಗೆ ಉತ್ತಮ ಸಂಬಂಧ ಹೊಂದಲು ಹಾಗೂ ಭವಿಷ್ಯದಲ್ಲಿ ಮಗು ಉತ್ತಮ, ಆರೋಗ್ಯವಂತ ಪ್ರಜೆಯಾಗಲು ತಾಯಿ ಹಾಲು ತುಂಬ ಪ್ರಾಮುಖ್ಯ ಹೊಂದಿದೆ ಎಂದರು.

ಜಿಲ್ಲೆಯಾದ್ಯಂತ 1,622 ಅಂಗನವಾಡಿ ಕೇಂದ್ರಗಳಲ್ಲಿ ಜೂನ್‌ 16 ರಿಂದ 31ರ ವರೆಗೆ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದರ ಜತೆಗೆ ಪೌಷ್ಠಿಕ ಆಹಾರ ಅಭಿಯಾನದ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಹುಟ್ಟಿದ ಮಗುವಿನಿಂದ ಹಿಡಿದು ಆರು ವರ್ಷದ ವರೆಗಿನ ಮಕ್ಕಳಿಗೆ ತೀವ್ರತರ ಅತಿಸಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಅಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಮತ್ತು ತಾಯಂದಿರು ಸಹಕಾರ ನೀಡಬೇಕು ಎಂದರು.

ಅಭಿಯಾನದ ಮೂಲಕ ಅಂಗನವಾಡಿಗಳಲ್ಲಿ ತಾಯಂದಿರನ್ನು ಕರೆದು, ಅವರಿಗೆ ಪೌಷ್ಟಿಕತೆಯ ಬಗ್ಗೆ ಮತ್ತು ಅಂಗನವಾಡಿಯಲ್ಲಿ ಸರ್ಕಾರದಿಂದ ಇರುವ ಸವಲತ್ತುಗಳನ್ನು ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗೆ ಹೊಸದಾಗಿ ಮಕ್ಕಳ ಸಮೀಕ್ಷೆ ಮಾಡಲು ಸೂಚನೆ ಸಹ ನೀಡಲಾಗಿದೆ. ವಿಶೇಷ ಸರ್ವೇ ಮಾಡಿ ಹುಟ್ಟಿದ ಮಗುವಿನಿಂದ ಆರು ವರ್ಷದ ಒಳಗಿನ ಮಕ್ಕಳು ಅಂಗನವಾಡಿ ಬಿಟ್ಟು ಹೋಗಿದ್ದರೆ, ಅವರನ್ನು ಅಂಗನವಾಡಿಯಲ್ಲಿ ಸೇರಿಸುವುದಕ್ಕೆ ಪ್ರಯತ್ನ ಇದಾಗಿದೆ ಎಂದ ಜಿಲ್ಲಾಧಿಕಾರಿಗಳು, ವಲಸೆ ಹೋಗುವವರು, ಕೂಲಿ ಕೆಲಸ ಮಾಡುವವರು, ಎಲ್ಲ ತಾಯಂದಿರು, ಪೋಷಕರು ತಮ್ಮ ಮನೆಗಳ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಸೇರಿಸಬೇಕು. ಸರ್ಕಾರವು ಅವರಿಗೆ ಒಳ್ಳೆಯ ಊಟ, ಜ್ಞಾನ ಸಮಗ್ರವಾಗಿ ಅಭಿವೃದ್ಧಿಪಡಿಸುವುದಕ್ಕೆ ಅವಕಾಶವಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ಅಂಗನವಾಡಿಯಲ್ಲಿದೆ ಎಂದರು.

ತಪ್ಪದೇ ಎದೆ ಹಾಲು ನೀಡಿ: ಜಿಪಂ ಸಿಇಓ ಭುವನೇಶ ಪಾಟೀಲ ಮಾತನಾಡಿ, ಸರ್ಕಾರದಿಂದ ಬಂದಿರುವ ಪೋಷಕಾಂಶವುಳ್ಳ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬೇಕು. ತಾಯಂದಿರು ಮಕ್ಕಳಿಗೆ ಆರು ತಿಂಗಳದ ವರೆಗೆ ಎದೆಹಾಲು ನೀಡಬೇಕು. ಎದೆಹಾಲು ನೀಡದೇ ಹೋದಲ್ಲಿ ಮಕ್ಕಳ ಬೆಳಗವಣಿಗೆಯಲ್ಲಿ ಕುಂಠಿತವಾಗುತ್ತದೆ. ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಬಂದ ಕಿಟ್‌ಗಳನ್ನು ಆಯಾ ಸಮಯಕ್ಕೆ ತಪ್ಪದೇ ಅವರಿಗೆ ತಲುಪಿಸಬೇಕು ಎಂದರು. ಇದೇ ವೇಳೆ ಗರ್ಭಿಣಿಯರಿಗೆ ಉಡಿ ತುಂಬುವ, ಸೀಮಂತ, ಆರು ತಿಂಗಳ ಮಕ್ಕಳಿಗೆ ಆಹಾರ ನೀಡಲಾಯಿತು. ಪೋಷಣ ಅಭಿಯಾನದಲ್ಲಿ ಗರ್ಭಿಣಿಯರಿಗೆ, ತಾಯಂದಿರಿಗೆ, ಮತ್ತು ಅಪೌಷ್ಟಿಕ ಮಕ್ಕಳಿಗೆ ನೀಡುವ ವಿವಿಧ ಪೌಷ್ಟಿಕತೆ ಇರುವ ಆಹಾರ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗಿತ್ತು. ಪ್ರೋಬೆಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಡಾ. ಕಮಲಾ ಬೈಲೂರು, ಡಿಎಚ್‌ಓ ಡಾ. ಎಸ್.ಎಂ. ಹೊನಕೇರಿ, ಪಾಲಿಕೆ ಸದಸ್ಯೆ ಲಕ್ಷ್ಮಿ ಹಿಂಡಸಗೇರಿ, ಅಶೋಕ ತುರಾಯಿದಾರ, ಮಹೇಶ ಕುಲಗಪ್ಪನವರ ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ