ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಸಭೆಗಳನ್ನು ನಡೆಸಿ ಮಾತನಾಡಿದರು. ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳನ್ನು ನಿಯಂತ್ರಿಸಲು ಚರಂಡಿ ಸ್ವಚ್ಛತೆ, ನೀರು ನಿಲ್ಲದಂತೆ ರಸ್ತೆಯಲ್ಲಿರುವ ಗುಂಡಿ ಮತ್ತು ತಗ್ಗುಗಳನ್ನು ಮುಚ್ಚಿಸಬೇಕು ಎಂದರು,
ಶಾಲಾ-ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ಮೇಲ್ಛಾವಣಿ ತೊಟ್ಟಿ, ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚಲು ಕ್ರಮಕೈಗೊಳ್ಳಬೇಕು. ಹಂದಿಗಳಿಂದ ಮೆದುಳು ಜ್ವರ ಹರಡುವ ಸಾಧ್ಯತೆಯಿರುವುದರಿಂದ ಹಂದಿಗಳನ್ನು ಜನರ ವಾಸಸ್ಥಳದಿಂದ ಕನಿಷ್ಟ 3 ಕಿ.ಮೀ. ದೂರದಲ್ಲಿರುವಂತೆ ಸೂಕ್ತ ಕ್ರಮವಹಿಸಬೇಕು ಎಂದು ಸೂಚಿಸಿದರು.173 ಹಾವು ಕಡಿತ ಪ್ರಕರಣ: ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 173 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಏಪ್ರಿಲ್‌ನಲ್ಲಿ ಶಿರಾ ತಾಲೂಕಿನಲ್ಲಿ ಹಾವು ಕಡಿತದಿಂದ 1 ಸಾವು ಸಂಭವಿಸಿದೆ ಎಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ರಾಮೇಗೌಡ ಸಭೆಗೆ ಮಾಹಿತಿ ನೀಡಿದರು.
ಡಾ. ರಾಮೇಗೌಡ ಮಾತನಾಡಿ, ತುಮಕೂರು, ತಿಪಟೂರು ಹಾಗೂ ತುರುವೇಕೆರೆ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಒಟ್ಟು 1244 ಕರುಳುಬೇನೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ 20 ಕುಷ್ಟರೋಗ, 872 ಕ್ಷಯ, 9589 ನಾಯಿಕಡಿತ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ ಎಲ್ಲಾ ತಾಲೂಕುಗಳ 31099 ನೀರಿನ ಮೂಲಗಳ ಮಾದರಿಯನ್ನು ವಿಶ್ಲೇಷಿಸಿದ್ದು, 766 ನೀರಿನ ಮೂಲ ಕುಡಿಯಲು ಯೋಗ್ಯವಿಲ್ಲವೆಂದು ವರದಿಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.
ನಂತರ ಜಿಲ್ಲಾ ತಂಬಾಕು ಕೋಶದ ಪ್ರಗತಿಯನ್ನು ಪರಿಶೀಲಿಸಲಾಯಿತು. ಮೇ 31ರ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು.