ಮಂಡ್ಯ ಜಿಲ್ಲೆಯಲ್ಲಿ ತಾರಕಕ್ಕೇರಿದ ಕಾವೇರಿ ಹೋರಾಟ, ಬೀದಿಗಳಿದು ಕನ್ನಡಪರ, ರೈತಸಂಘಟನೆಗಳ ಆಕ್ರೋಶ

KannadaprabhaNewsNetwork |  
Published : Jul 30, 2026, 01:30 AM IST
೨೯ಕೆಎಂಎನ್‌ಡಿ-೧ಪ್ರತಿಭಟನೆ ಕೈ ಬಿಡುವಂತೆ ಹೋರಾಟಗಾರರನ್ನು ಮನವಿ ಮಾಡುತ್ತಿರುವ ಪೊಲೀಸರು. | Kannada Prabha

ಸಾರಾಂಶ

ಬೆಳೆದು ನಿಂತಿರುವ ಕಬ್ಬು ಬೆಳೆಗೆ ನೀರಿಲ್ಲ, ಹೊಸ ಬೆಳೆ ಬೆಳೆಯುದಕ್ಕೂ ನೀರಿಲ್ಲ, ಕೆರೆ- ಕಟ್ಟೆಗಳೆಲ್ಲಾ ಖಾಲಿಯಾಗಿವೆ. ಕುಡಿಯುವ ನೀರಿಗೆ ಬೇಕಿರುವಷ್ಟು ಮಾತ್ರ ಅಣೆಕಟ್ಟೆಯಲ್ಲಿದೆ. ಮಳೆಯೇ ಬಾರದಿರುವಾಗ ತಮಿಳುನಾಡಿಗೆ ನೀರು ಕೊಡಿ ಎಂದರೆ ಎಲ್ಲಿಂದ ಕೊಡಲು ಸಾಧ್ಯ. ರಾಜ್ಯಸರ್ಕಾರ ನ್ಯಾಯಮಂಡಳಿ ಶಿಫಾರಸನ್ನು ಪಾಲಿಸದಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು, ರೈತಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಹೋರಾಟ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲೂ ಪ್ರತಿಭಟನೆಗಳು ನಡೆದಿದ್ದು, ಕಾವೇರಿ ಹೋರಾಟದ ಕಿಚ್ಚು ತಾರಕಕ್ಕೇರಿದೆ.

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಕಲ್ಲುಗಳನ್ನು ಹೊತ್ತು, ಬಿಂದಿಗೆಗಳನ್ನು ಹಿಡಿದು, ಒಣಗಿದ ಕಬ್ಬಿನ ಜೊಲ್ಲೆಗಳನ್ನು ಪ್ರದರ್ಶಿಸುತ್ತಾ, ಉರುಳುಸೇವೆ ನಡೆಸುತ್ತಾ, ಲಾಲಿಪಪ್, ಹುರುಳಿಕಾಳುಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದರು.

ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ನೀರಿಲ್ಲದೆ ಭಣಗುಡುತ್ತಿವೆ. ಮಳೆ ಕೊರತೆಯಿಂದ ಜಲಾಶಯಗಳು ಭರ್ತಿಯಾಗಿಲ್ಲ. ಅಣೆಕಟ್ಟೆಗಳಲ್ಲಿರುವ ನೀರು ಕುಡಿಯುವುದಕ್ಕೇ ಸಾಲುತ್ತಿಲ್ಲ. ಅಂದ ಮೇಲೆ ೧೫ ದಿನಗಳ ಕಾಲ ೩೫೦೦ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಯಾವ ಮಾನದಂಡ ಆಧರಿಸಿ ಶಿಫಾರಸು ಮಾಡಿದೆ ಎಂದು ಪ್ರಶ್ನಿಸಿದರು.

ಕಲ್ಲು ಹೊತ್ತು, ಬಿಂದಿಗೆ ಹಿಡಿದು ಕರವೇ ಹೋರಾಟ:

ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕೆ.ನಾರಾಯಣಗೌಡ) ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹೋರಾಟ ನಡೆಸಿದರು. ವೇದಿಕೆಯ ಪುರುಷ ಕಾರ್ಯಕರ್ತರು ಕಲ್ಲುಗಳನ್ನು ಹೊತ್ತುಕೊಂಡರೆ, ಮಹಿಳೆಯರು ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು, ಒಣಗಿದ ಕಬ್ಬಿನ ಜೊಲ್ಲೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ವೇದಿಕೆ ಅಧ್ಯಕ್ಷ ಎಸ್.ವೇಣು ಮಾತನಾಡಿ, ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ನೀರು ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸಿಗೆ ಮಣಿದು ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಮಾಡಬಾರದು. ಇಲ್ಲಿನ ರೈತರ ಹಿತವನ್ನು ಬಲಿಕೊಡಬಾರದು. ಸಂಕಷ್ಟ ಪರಿಸ್ಥಿತಿಯಲ್ಲಿರುವ ಜನರು, ರೈತರನ್ನು ರಕ್ಷಣೆ ಮಾಡಬೇಕು. ನೀರು ಬಿಡುವ ನಿರ್ಧಾರ ಕೈಗೊಂಡರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸುಜಾತ ಕೃಷ್ಣ, ಮಾ.ಸೋ.ಚಿದಂಬರ್, ಕೆ.ಟಿ.ಶಂಕರೇಗೌಡ, ಭಾರತಿ ಕುಮಾರ್, ಮಳವಳ್ಳಿ ತಾಲೂಕು ಅಧ್ಯಕ್ಷ ಅಪ್ಪೇಗೌಡ, ಮದ್ದೂರಿನ ರಾಮಚಂದ್ರು, ಶ್ರೀರಂಗಪಟ್ಟಣ ದೇವೇಗೌಡ, ಪಾಂಡವಪುರ ಹರೀಶ್ ಇತರರಿದ್ದರು.

ಬಿಜೆಪಿಯಿಂದ ಲಾಲಿಪಪ್, ಹುರುಳಿಕಾಳು ಚಳವಳಿ:

ಬಿಜೆಪಿ ವತಿಯಿಂದ ಲಾಲಿಪಪ್, ಹುರುಳಿಕಾಳು ಚಳವಳಿ ನಡೆಸಲಾಯಿತು. ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಲಾಲಿಪಪ್‌ಗಳನ್ನು ಹಂಚಿದರೆ, ಕಾರ್ಯಕರ್ತ ಶಿವಕುಮಾರ್ ಹುರುಳಿಕಾಳು ಮುಂದಿಟ್ಟುಕೊಂಡು ಪ್ರತಿಭಟಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನಗೆ ಪೆನ್ನು-ಪೇಪರ್ ನೀಡುವಂತೆ ಕೇಳುತ್ತಿದ್ದರು. ಅವರ ಕೈಗೆ ಪೆನ್ನು-ಪೇಪರ್ ಕೊಟ್ಟಿರುವುದರಿಂದ ಅವರು ರೈತರ ಕೈಗೆ ಚಿಪ್ಪು ಕೊಟ್ಟು, ಹೋರಾಟಗಾರರಿಗೆ ಲಾಲಿಪಪ್ ತಿನ್ನಿಸುತ್ತಿದ್ದಾರೆ. ಕಾವೇರಿ ನೀರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ಏನೇ ಕಾನೂನು ಸಂಕಷ್ಟ ಎದುರಾದರೂ ನೀರು ಬಿಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಂದ್ರು, ಯೋಗಾನಂದ, ಶಿವಲಿಂಗಯ್ಯ, ಹೊಸಹಳ್ಳಿ ಶಿವು, ಮಾದರಾಜೇಅರಸ್ ಇದ್ದರು.

ರೈತಸಂಘದಿಂದ ರಸ್ತೆತಡೆ:

ತಮಿಳುನಾಡಿಗೆ ನೀರು ಬಿಡುಗಡೆಗೊಳಿಸದಂತೆ ಒತ್ತಾಯಿಸಿ ರೈತಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಬೆಳೆದು ನಿಂತಿರುವ ಕಬ್ಬು ಬೆಳೆಗೆ ನೀರಿಲ್ಲ, ಹೊಸ ಬೆಳೆ ಬೆಳೆಯುದಕ್ಕೂ ನೀರಿಲ್ಲ, ಕೆರೆ- ಕಟ್ಟೆಗಳೆಲ್ಲಾ ಖಾಲಿಯಾಗಿವೆ. ಕುಡಿಯುವ ನೀರಿಗೆ ಬೇಕಿರುವಷ್ಟು ಮಾತ್ರ ಅಣೆಕಟ್ಟೆಯಲ್ಲಿದೆ. ಮಳೆಯೇ ಬಾರದಿರುವಾಗ ತಮಿಳುನಾಡಿಗೆ ನೀರು ಕೊಡಿ ಎಂದರೆ ಎಲ್ಲಿಂದ ಕೊಡಲು ಸಾಧ್ಯ. ರಾಜ್ಯಸರ್ಕಾರ ನ್ಯಾಯಮಂಡಳಿ ಶಿಫಾರಸನ್ನು ಪಾಲಿಸದಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವಳ್ಳಿ ಚಂದ್ರಶೇಖರ್, ಗೋಪಾಲಪುರ ಸುರೇಶ್, ಕೋಣನಹಳ್ಳಿ ಜವರೇಗೌಡ, ಮಂಜೇಶ್‌ಗೌಡ, ಕೀಲಾರ ಸೋಮಶೇಖರ್ ಇತರರಿದ್ದರು.

ಕರವೇ (ಪ್ರವೀಣ್ ಶೆಟ್ಟಿ) ಹೋರಾಟ:

ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸಿಗೆ ಮನ್ನಣೆ ನೀಡದಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ) ಕಾರ್ಯಕರ್ತರು ನಗರದಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿ, ಮಳೆ ಪರಿಸ್ಥಿತಿ ಗೊತ್ತಿದ್ದೂ ಕಾವೇರಿ ನೀರು ನಿರ್ವಹಣಾ ಮಂಡಳಿ ನೀರು ಬಿಡುಗಡೆಗೆ ಶಿಫಾರಸು ಮಾಡಿರುವುದು ರೈತರಿಗೆ ಆಘಾತ ಮೂಡಿಸಿದೆ. ತಜ್ಞರ ತಂಡವನ್ನು ಕಳುಹಿಸಿ ವಾಸ್ತವಾಂಶವನ್ನು ಪರಿಶೀಲಿಸಲಿ. ಇಲ್ಲಿನವರಿಗೆ ಕುಡಿಯುವುದಕ್ಕೆ ನೀರಿಲ್ಲವೆಂದ ಮೇಲೆ ತಮಿಳುನಾಡಿಗೆ ೪ ಟಿಎಂಸಿ ನೀರನ್ನು ಬಿಡುವುದು ಹೇಗೆ. ಇಂತಹ ಅಮಾನವೀಯ ಶಿಫಾರಸುಗಳು ರಾಜ್ಯ- ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ. ತಮಿಳುನಾಡಿಗೆ ನೀರು ಬಿಡದಿರುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಬೇಕು ಎಂದು ಹೇಳಿದರು.

---

ರಸ್ತೆಯಿಂದ ಪ್ರತಿಭಟನಾಕಾರರನ್ನು ಎಳೆದುಹಾಕಿದ ಪೊಲೀಸರು

ತಮಿಳುನಾಡಿಗೆ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿ ಕನ್ನಡಪರ, ರೈತಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹೋರಾಟ ಕೈಬಿಡುವಂತೆ ಪೊಲೀಸರು ಮಾಡಿದ ಮನವಿಗೆ ಸ್ಪಂದಿಸದಿದ್ದಾಗ ಪ್ರತಿಭಟನಾಕಾರರನ್ನು ರಸ್ತೆಯಿಂದ ಪಕ್ಕಕ್ಕೆ ಎಳೆದುಹಾಕಿದ ಘಟನೆ ನಡೆಯಿತು.

ಬೆಂಗಳೂರು-ಮೈಸೂರು ಹೆದ್ದಾರಿಯ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ರಸ್ತೆಯಲ್ಲೇ ಕುಳಿತು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ವಲ್ಪ ಕಾಲ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರು ಅವಕಾಶ ನೀಡಿದ್ದರು. ಬಹಳ ಸಮಯವಾದರೂ ಹೋರಾಟಗಾರರು ರಸ್ತೆಯಿಂದ ತೆರವಾಗಲೇ ಇಲ್ಲ. ವಾಹನಗಳು ಮುಂದೆ ಚಲಿಸಲಾಗದೆ ಸಾಲುಗಟ್ಟಿ ನಿಂತಿದ್ದವು. ಪ್ರತಿಭಟನೆ ಕೈಬಿಡುವಂತೆ ಅಥವಾ ರಸ್ತೆ ಪಕ್ಕ ಕುಳಿತು ಪ್ರತಿಭಟನೆ ನಡೆಸುವಂತೆ ಖಾಕಿಧಾರಿಗಳು ಮಾಡಿದ ಮನವಿಗೆ ಪ್ರತಿಭಟನಾಕಾರರು ಕಿವಿಗೊಡಲಿಲ್ಲ. ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಿಂದ ಹೊರಕ್ಕೆ ಎಳೆದುಹಾಕಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವ ಸಾಯಿ ಕೃಪಾದಲ್ಲಿ ಗುರು ಸ್ಮರಣೆ
ಎಲ್ಲ ತಾಲೂಕುಗಳಿಗೂ ತಲಾ ₹50 ಕೋಟಿ ಬಿಡುಗಡೆಗೊಳಿಸಿ