ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲದೆ ಡ್ಯಾಂಗಳು ಖಾಲಿಯಾಗಿವೆ. ಬರಗಾಲ ತಾಂಡವಾಡುತ್ತಿದೆ. ರಾಜ್ಯದ ರೈತರ ಪರವಾಗಿ ತೀರ್ಮಾನ ತೆಗೆದುಕೊಳ್ಳದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ. ಇದನ್ನು ರಾಜ್ಯ ರೈತ ಸಂಘ ಖಂಡಿಸುತ್ತದೆ ಎಂದರು. ಬರಗಾಲದಿಂದ ರೈತಾಪಿಗಳು ತತ್ತರಿಸಿ ಹೋಗಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ಪರಿಹಾರವಾಗಿ ರೈತರಿಗೆ ಪ್ಯಾಕೇಜ್ ನೀಡಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ಹೇಮಾವತಿ ನೀರನ್ನು ತಾಲೂಕಿಗೆ ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಸಂಚಾಲಕ ಸತೀಶ್ ಮಾತನಾಡಿ ರಾಜ್ಯದಲ್ಲಿ ಬರಗಾಲ ಇದೆ ಡ್ಯಾಂ ಗಳಲ್ಲಿ ಇರುವ ನೀರನ್ನು ರಾತ್ರೋ ರಾತ್ರಿ ತಮಿಳುನಾಡಿಗೆ ಹರಿಸಿದರೆ ರಾಜ್ಯದ ರೈತರು ಮತ್ತು ಜನರ ಪರಿಸ್ಥಿತಿ ಕಷ್ಟವಾಗಲಿದೆ. ಆದ್ದರಿಂದ ಕೂಡಲೇ ನೀರನ್ನು ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಪ್ರತಿಭಟನೆ ಮುನ್ನಾ ತಾಲೂಕು ಕಛೇರಿ ಮುಂಭಾಗದಲ್ಲಿನ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಸುನಿಲ್ ಕುಮಾರ್ ಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಮಾರುತಿ, ವೈರಮುಡಿ, ಕೃಷ್ಣಮೂರ್ತಿ, ಲೋಕೇಶ್, ಗವಿರಂಗ, ಉಪೇಂದ್ರ, ಚಂದ್ರಣ್ಣ, ವಿಜಯನರಸಿಂಹ ಸೇರಿದಂತೆ ಹಲವು ಮುಖಂಡರು ಇದ್ದರು.