ವಕೀಲರು ಒಪ್ಪಿದ್ರೆ ಇಂದೇ ಕಾವೇರಿ ಮೇಲ್ಮನವಿ

KannadaprabhaNewsNetwork |  
Published : Jul 30, 2026, 02:00 AM IST
(ಫೋಟೊಬಿಕೆಟಿ89,(1) ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಶಾಸಕ ಉಮೇಶ ಮೇಟಿ ಅವರು ಹಡಪದ ಅಪ್ಪಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.) | Kannada Prabha

ಸಾರಾಂಶ

ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇಲಾಖೆಯಿಂದ ಕರಡು ಅರ್ಜಿ ಸಿದ್ಧಪಡಿಸಲಾಗಿದೆ. ರಾಜ್ಯದ ಪರ ವಕೀಲರು ಅದನ್ನು ಪರಿಶೀಲಿಸಿ ಸಮ್ಮತಿಸಿದರೆ ಗುರುವಾರವೇ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇಲಾಖೆಯಿಂದ ಕರಡು ಅರ್ಜಿ ಸಿದ್ಧಪಡಿಸಲಾಗಿದೆ. ರಾಜ್ಯದ ಪರ ವಕೀಲರು ಅದನ್ನು ಪರಿಶೀಲಿಸಿ ಸಮ್ಮತಿಸಿದರೆ ಗುರುವಾರವೇ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಿಡಬ್ಲ್ಯುಆರ್‌ಸಿ ತೀರ್ಮಾನದ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗೋ಼ಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಸಿಡಬ್ಲ್ಯುಆರ್‌ಸಿ ಆದೇಶದಂತೆ ತಮಿಳುನಾಡಿಗೆ ನಿತ್ಯ 3,500 ಕ್ಯುಸೆಕ್‌ನಂತೆ 15 ದಿನ ನೀರು ಹರಿಸುವುದು ಕಷ್ಟದಾಯಕ. ಹಾಗಾಗಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಅನೇಕ ವರ್ಷಗಳಿಂದ ಇಲಾಖೆಯ ಸಲಹೆಗಾರರಾಗಿರುವ ಶ್ರೀರಾಮಯ್ಯ ಅವರು ಮೇಲ್ಮನವಿ ಅರ್ಜಿಯ ಕರಡು ಸಿದ್ಧಪಡಿಸಿದ್ದಾರೆ. ಅದನ್ನು ನಮ್ಮ ರಾಜ್ಯದ ಪರ ವಕೀಲರಾದ ಮೋಹನ್‌ ಕಾತರಕಿ ಅವರಿಗೆ ಕಳುಹಿಸಲಾಗಿದೆ. ಅವರು ಒಪ್ಪಿದರೆ ಗುರುವಾರವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಿಗೆ (ಕಳೆದ ಜೂ.1ರಿಂದ ಜು.27ರವರೆಗೆ) ಸಂಚಿತ ಒಳಹರಿವು 30 ವರ್ಷಗಳ ಸರಾಸರಿಗಿಂತ ಶೇ.65.86 ಕಡಿಮೆಯಾಗಿದೆ. ಜಲಾಶಯಗಳಲ್ಲಿ ಪ್ರಸಕ್ತ 46 ಟಿಎಂಸಿಯಷ್ಟು ಮಾತ್ರ ನೀರಿದ್ದು, ಇದು ಕಾವೇರಿ ಜಲಾನಯನ ಪ್ರದೇಶದ ಮುಂಬರುವ ಕುಡಿಯುವ ನೀರು ಹಾಗೂ ಆಂತರಿಕ ಅಗತ್ಯತೆಗಳನ್ನು ಪೂರೈಸಲು ಮಾತ್ರ ಸಾಧ್ಯವಾಗಲಿದೆ. ಪ್ರತೀ ದಿನ ನಮಗೆ ಮೂರೂವರೆ ಟಿಎಂಸಿಯಷ್ಟು ನೀರು ಕುಡಿಯುವ ಬಳಕೆಗೆ ಬೇಕಾಗುತ್ತದೆ. ಹಾಗಾಗಿ ಸಿಡಬ್ಲ್ಯುಆರ್‌ಸಿ ಆದೇಶ ಪಾಲನೆ ಕಷ್ಟವಾಗಲಿದೆ. ಹಾಗಾಗಿ ಸಿಡಬ್ಲ್ಯುಎಂಎ ಮುಂದೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ. ಅದನ್ನು ಆ ನಂತರ ಯೋಚಿಸಲಾಗುವುದು ಎಂದರು.

ಬಿಜೆಪಿಯವರಿಗೆ ಕಾಮನ್‌ ಸೆನ್ಸ್‌ ಇಲ್ಲ:

ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜ್ಯ ಸರ್ಕಾರ ನಮಗೇ ನೀರು ಇಲ್ಲದಿದ್ದರೂ ತಮಿಳುನಾಡಿಗೆ ಬಿಟ್ಟು ರಾಜ್ಯವನ್ನು ಅಡ ಇಡುತ್ತಿದೆ ಎಂಬ ಬಿಜೆಪಿಯವರ ಟೀಕೆ ಕುರಿತು ಕೇಳಿದಾಗ, ಇಂಗ್ಲೀಷ್‌ನಲ್ಲಿ ಕಾಮನ್ ಸೆನ್ಸ್ ಇಲ್ಲ ಎಂದರೆ ಬಿಜೆಪಿಯವರು ಸಿಟ್ಟಾಗುತ್ತಾರೆ. ಅದಕ್ಕೆ ಕನ್ನಡದಲ್ಲಿ ಹೇಳುವುದಾದರೆ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನ ಸ್ವಲ್ಪ ಕಡಿಮೆ. ಹಾಗಾಗಿ ಹೀಗೆಲ್ಲಾ ಹೇಳುತ್ತಾರೆ. ಬಿಳಿಗುಂಡ್ಲುವಿಗೆ ಹೋಗಿ ನೋಡಲಿ ನಾವು ಎಷ್ಟು ನೀರು ಬಿಟ್ಟಿದ್ದೇವೆ ಇದುವರೆಗೂ ಎಂದು ತಿಳಿಯುತ್ತದೆ. ಇದುವರೆಗೆ ಬರೀ ಮೂರೂವರೆ ಟಿಎಂಸಿ ನೀರು ಅಷ್ಟೇ ಬಿಟ್ಟಿರೋದು ಎಂದು ಸ್ಪಷ್ಟಪಡಿಸಿದರು.

ಸಿಡಬ್ಲ್ಯುಆರ್‌ಸಿ ಮುಂದೆ ರಾಜ್ಯ ಸರ್ಕಾರ ಸಮರ್ಥವಾದ ಮಂಡಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರ ಆರೋಪ ಸರಿಯಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಇದ್ದ ಶ್ರಿರಾಮಯ್ಯ ಅವರೇ ಈಗಲೂ ನಮ್ಮ ಇಲಾಖೆಯ ಸಲಹೆಗಾರರಾಗಿದ್ದಾರೆ. ಮೋಹನ್‌ ಕಾತರಕಿ ಅವರೇ ರಾಜ್ಯದ ಪರ ವಕೀಲರಾಗಿದ್ದಾರೆ. ಅವರು ವಸ್ತುಸ್ಥಿತಿ ಸಹಿತವಾಗಿ ಸಮರ್ಥವಾಗಿ ವಾದ ಮಾಡಿದ್ದಾರೆ. ತಮಿಳುನಾಡು ನೀರು ಬಿಡುವಂತೆ ಮೊದಲು ಎರಡು ಬಾರಿ ಸಲ್ಲಿಸಿದ್ದ ಅರ್ಜಿಯನ್ನು ಸಮಿತಿ ಒಪ್ಪಿರಲಿಲ್ಲ. ಇದು ಮೂರನೇ ಬಾರಿಯದ್ದು ಹಾಗಾಗಿ ನಿತ್ಯ 3500 ಕ್ಯೂಸೆಕ್‌ ನೀರು ಹರಿಸಲು ಆದೇಶಿಸಿದೆ. ಆದರೆ, ನಮಗೆ ಈ ಆದೇಶದಲ್ಲಿ ಸಮಾಧಾನವಿಲ್ಲ. ಹಾಗಾಗಿ ಮೇಲ್ಮನವಿ ಹೋಗುತ್ತೇವೆ ಎಂದರು.ಕಾವೇರಿ ವಿವಾದ: ತ.ನಾಡು ಸಿಎಂ ಸಭೆ ಬಗ್ಗೆ ಕುತೂಹಲ:

ಮೇಕೆದಾಟು ಯೋಜನೆ ಸಂಬಂಧ ಚರ್ಚೆಗೆ ಆ.3ರಂದು ಬರುವಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರಿಗೆ ಆಹ್ವಾನ ನೀಡಿದ್ದು, ಸಭೆಗೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.ಆದರೆ, ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ವಿಜಯ್‌ ಅವರು ರಾಜ್ಯಕ್ಕೆ ಬರುತ್ತಾರೆಯೇ? ಅಥವಾ ಇಲ್ಲವೇ ಎಂಬುದರ ಬಗ್ಗೆ ತಮಿಳುನಾಡು ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ರಾಜ್ಯಕ್ಕೆ ಬರುತ್ತಾರೆಯೇ? ಅಥವಾ ವರ್ಚುವಲ್‌ ಮೂಲಕ ಭಾಗವಹಿಸಲಿದ್ದಾರೆಯೇ? ಅಥವಾ ಚರ್ಚೆಯಿಂದ ಅಂತರ ಕಾಯ್ದುಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.ಮೇಕೆದಾಟು ವಿಚಾರವಾಗಿ ಚರ್ಚಿಸಲು ವಿಜಯ್‌ ಆಸಕ್ತಿ ತೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಸಭೆಗೆ ದಿನಾಂಕ ನಿಗದಿ ಮಾಡಿ ಆಹ್ವಾನ ಕಳುಹಿಸಿದ್ದರು. ಈ ಬಗ್ಗೆ ತಮಿಳುನಾಡಿನಿಂದ ಸ್ಪಷ್ಟತೆ ದೊರೆತಿಲ್ಲ.ಇದರ ನಡುವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ವಿಜಯ್‌ ಅವರು ರಾಜ್ಯಕ್ಕೆ ಬರಲು ಆಸಕ್ತಿ ತೋರಿದ್ದರು. ಹೀಗಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಜತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಸ್ಥಿತಿ ತೋರಿಸಲು ಸಹ ಸಿದ್ಧತೆ ಮಾಡಿದ್ದೇವೆ. ಏನಾಗುತ್ತದೆಯೋ ನೋಡೋಣ ಎಂದಿದ್ದಾರೆ.ಇದರ ನಡುವೆ ಗುರುವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹೊರ ಬೀಳಲಿದ್ದು, ಉಭಯ ರಾಜ್ಯಗಳಲ್ಲೂ ಕಾವೇರಿ ಹೋರಾಟ ಜೋರು ಪಡೆದಿದೆ. ತಮಿಳುನಾಡಿನಲ್ಲಿ ವಿಜಯ್‌ ಕರ್ನಾಟಕಕ್ಕೆ ತೆರಳುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಂದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರ ಕರ್ನಾಟಕ ಭೇಟಿ ಬಗ್ಗೆ ಕುತೂಹಲ ಮೂಡಿದೆ.ದೆಹಲಿಯಲ್ಲಿಂದು ಕಾವೇರಿ ನೀರು ಪ್ರಾಧಿಕಾರದ ಸಭೆ:ಮುಂಗಾರು ಮಳೆ ಕೊರತೆ, ರಾಜ್ಯದಲ್ಲಿನ ತೀವ್ರ ಬರ ಹಾಗೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್‌ ನಂತೆ 4.5 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಲಿದೆ.

ದೆಹಲಿಯ ಕಾವೇರಿ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕರ್ನಾಟಕ ಎಸಿಎಸ್ ಗೌರವಗುಪ್ತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ತೀವ್ರ ಬರದ ನಡುವೆಯೇ ತಮಿಳುನಾಡಿಗೆ ನೀರು ಹರಿಸಬೇಕೆಂಬ ಸಮಿತಿಯ ಶಿಫಾರಸ್ಸು, ಕಾವೇರಿ ಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಗುರುವಾರ ನಡೆಯಲಿರುವ ಪ್ರಾಧಿಕಾರದ ಸಭೆ ಎಲ್ಲರ ಗಮನ ಸೆಳೆದಿದ್ದು, ಸಮಿತಿಯ ಆದೇಶಕ್ಕೆ ಪ್ರಾಧಿಕಾರ ತಡೆ ನೀಡುತ್ತಾ? ಎಂಬುದು ಕುತೂಹಲ ಮೂಡಿಸಿದೆ.

ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದ ಜಲ-ಹವಾಮಾನ ಪರಿಸ್ಥಿತಿ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ, 2026-27ರ ಜಲ ವರ್ಷದಲ್ಲಿ ಪುದುಚೇರಿಯ ಯು.ಟಿ.ಯ ಬಿಳಿಗುಂಡ್ಲು ಮತ್ತು ಕಾರೈಕಲ್‌ ಪ್ರದೇಶದಲ್ಲಿ ಕಂಡು ಬಂದ ಸಂಚಿತ ಹರಿವಿನ ಕೊರತೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವಸ್ಥಾನಗಳ ಹುಂಡಿಗೆ 360 ಡಿಗ್ರಿ ಸಿಸಿಟಿವಿ ಭದ್ರತೆ: ಎಡಿಸಿ ಝುಬೇರ್ ಸೂಚನೆ
ಶ್ರದ್ಧಾ, ಭಕ್ತಿಯಿಂದ ನಡೆದ ಗುರುಪೂರ್ಣಿಮೆ