ಕಾವೇರಿ ನೀರು ಪೂರೈಕೆಯ ಕೊಳವೆಗೆ ಅನಧಿಕೃತವಾಗಿ ಕೊಳಚೆ ನೀರಿನ ಕೊಳವೆಯ ಸಂಪರ್ಕ: ಪೈಪ್‌ ಸ್ಫೋಟಿಸಿ ಮನೆಗಳಿಗೆ ಹಾನಿ

KannadaprabhaNewsNetwork |  
Published : Nov 14, 2024, 01:31 AM ISTUpdated : Nov 14, 2024, 10:02 AM IST
BWSSB | Kannada Prabha

ಸಾರಾಂಶ

ಕಾವೇರಿ ನೀರು ಪೂರೈಕೆಯ ಕೊಳವೆಗೆ ಅನಧಿಕೃತವಾಗಿ ಕೊಳಚೆ ನೀರಿನ ಕೊಳವೆಯ ಸಂಪರ್ಕ ಕೊಟ್ಟಿದ್ದರಿಂದ ಕೊಳವೆ ಕಿತ್ತು ಹೋಗಿ ರಭಸವಾಗಿ ನೀರು ಚಿಮ್ಮಿ ಅಕ್ಕಪಕ್ಕದ ಮನೆಗಳಿಗೆ ಹಾಗೂ ಕಾರಿಗೆ ಹಾನಿ ಉಂಟಾದ ಘಟನೆ ಥಣಿಸಂದ್ರದ ಹೆಗಡೆ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

 ಬೆಂಗಳೂರು : ಕಾವೇರಿ ನೀರು ಪೂರೈಕೆಯ ಕೊಳವೆಗೆ ಅನಧಿಕೃತವಾಗಿ ಕೊಳಚೆ ನೀರಿನ ಕೊಳವೆಯ ಸಂಪರ್ಕ ಕೊಟ್ಟಿದ್ದರಿಂದ ಕೊಳವೆ ಕಿತ್ತು ಹೋಗಿ ರಭಸವಾಗಿ ನೀರು ಚಿಮ್ಮಿ ಅಕ್ಕಪಕ್ಕದ ಮನೆಗಳಿಗೆ ಹಾಗೂ ಕಾರಿಗೆ ಹಾನಿ ಉಂಟಾದ ಘಟನೆ ಥಣಿಸಂದ್ರದ ಹೆಗಡೆ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

110 ಹಳ್ಳಿಗಳಿಗೆ ಕಾವೇರಿ-5 ಹಂತದ ನೀರು ಪೂರೈಕೆಗೆ ಕಳೆದ ಎರಡ್ಮೂರು ವರ್ಷದ ಹಿಂದೆಯೇ ಜಲಮಂಡಳಿ ಕೊಳವೆ ಅಳವಡಿಕೆ ಮಾಡಿತ್ತು. ಕಳೆದ ತಿಂಗಳು ಯೋಜನೆ ಚಾಲನೆ ದೊರೆತ ಹಿನ್ನೆಲೆ ಇದೀಗ ಈ ಭಾಗದಲ್ಲಿ ಹಂತ-ಹಂತವಾಗಿ ಕಾವೇರಿ ನೀರು ಪೂರೈಕೆ ಆರಂಭಿಸಲಾಗುತ್ತಿದೆ.

ಈ ನಡೆವೆ ಹೆಗಡೆ ನಗರದ ರಾಯಲ್‌ ಬ್ಲಿಸ್‌ ಅಪಾರ್ಟ್‌ಮೆಂಟ್‌ ಮಾಲೀಕ ಕಾವೇರಿ ನೀರು ಪೂರೈಕೆಗೆ ಅಳವಡಿಕೆ ಮಾಡಲಾಗಿದ್ದ ಕೊಳವೆಗೆ ಅನಧಿಕೃತವಾಗಿ ಕಟ್ಟಡದ ಕೊಳಚೆ ನೀರು ಹರಿದು ಹೋಗುವ ಕೊಳವೆ ಅಳವಡಿಕೆ ಮಾಡಿಕೊಂಡು ಕಾಂಕ್ರೀಟ್‌ನಿಂದ ಮುಚ್ಚಿದ್ದಾನೆ.

ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಥಣಿಸಂದ್ರದ ಹೆಗಡೆನಗರದ ಮಾರ್ಗವಾಗಿ ಚೊಕ್ಕನಹಳ್ಳಿ ವರೆಗೆ ಕಾವೇರಿ ನೀರು ಹರಿವ ಕೊಳವೆ ಸ್ವಚ್ಛಗೊಳಿಸಿ ನೀರು ಪೂರೈಕೆ ಚಾಲನೆ ನೀಡಲಾಗಿದೆ. ರಾತ್ರಿ 12.30ರ ಸುಮಾರಿಗೆ ಹೆಗಡೆ ನಗರದಲ್ಲಿ ಕಾವೇರಿ ಕೊಳವೆ ಕಿತ್ತುಕೊಂಡು ರಭಸವಾಗಿ ನೀರು ಹರಿಯುತ್ತಿರುವ ದೂರು ಬಂದಿದ್ದು, ತಕ್ಷಣ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಬುಧವಾರ ಬೆಳಗ್ಗೆ ಜಲಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ ಕಾವೇರಿ ನೀರಿನ ಕೊಳವೆಗೆ ಕೊಳಚೆ ನೀರಿನ ಕೊಳವೆಯ ಸಂಪರ್ಕ ನೀಡಿರುವುದು ಪತ್ತೆಯಾಗಿದೆ.

ರಭಸವಾಗಿ ನೀರು ಚಿಮ್ಮಿದ ಪರಿಣಾಮ ರಾಯಲ್‌ ಬ್ಲಿಸ್‌ ಅಪಾರ್ಟ್‌ಮೆಂಟ್‌ ಪಕ್ಕದ ಕಟ್ಟಡದ ಗ್ಲಾಸ್‌ ಒಡೆದು ನೀರು ಒಳಗೆ ಹೋಗಿ ಲ್ಯಾಪ್‌ ಟಾಪ್‌ ಹಾಗೂ ಕಟ್ಟಡ ಸೀಲಿಂಗ್‌ಗೆ ಹಾನಿ ಉಂಟಾಗಿದೆ. ಜತೆಗೆ ಮನೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಪುಡಿಯಾಗಿದೆ. ಜಲಮಂಡಳಿಯ ಕೊಳವೆ ಹಾಗೂ ರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿದೆ. ಸುಮಾರು 50 ಲಕ್ಷ ಲೀ.ಕಾವೇರಿ ನೀರು ಪೋಲಾಗಿದೆ. ಘಟನೆಯಿಂದ ಉಂಟಾದ ನಷ್ಟದ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದು, ಎಲ್ಲ ನಷ್ಟವನ್ನು ರಾಯಲ್‌ ಬ್ಲಿಸ್‌ ಅಪಾರ್ಟ್‌ಮೆಂಟ್‌ ಮಾಲೀಕನಿಂದ ವಸೂಲಿ ಮಾಡುವುದಕ್ಕೆ ಹಾಗೂ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಲಮಂಡಳಿಯ ಎಂಜಿನಿಯರ್‌ ದೀಪಕ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಾನೂನು ಕ್ರಮಕ್ಕೆ ಸೂಚನೆ:

ಅನಧಿಕೃತವಾಗಿ ಕಾವೇರಿ 5 ನೇ ಹಂತದ ಕೊಳವೆಗೆ ಸ್ಯಾನಿಟರಿ ಸಂಪರ್ಕ ನೀಡಿದ್ದ ರಾಯಲ್‌ ಬ್ಲಿಸ್‌ ಅಪಾರ್ಟ್‌ಮೆಂಟ್‌ ನ ಕಟ್ಟಡದ ಮಾಲೀಕನ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವುದಕ್ಕೆ ಅಧಿಕಾರಿಗಳಿಗೆ ಜಲಮಂಡಳಿಯ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ