ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ತಾಕೀತು
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಜಿಲ್ಲಾಡಳಿತದ ವತಿಯಿಂದ ಇದೇ 27ರಂದು ಬೆಳಗ್ಗೆ 11ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಆಚರಣೆ ಅಂಗವಾಗಿ ಡಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಆಚರಿಸಲಾಗುವ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಪ್ರತಿ ತಾಲೂಕಿಗೆ ₹1ಲಕ್ಷ ವಿಶೇಷ ಅನುದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬಿಡುಗಡೆ ಮಾಡಲಾಗಿದೆ. 27ರಂದು ಜಿಲ್ಲಾಮಟ್ಟದಲ್ಲಿ, ತಾಲೂಕುಮಟ್ಟದಲ್ಲಿ ಹಾಗೂ ಎಲ್ಲ ಶಾಲಾ-ಕಾಲೇಜುಗಳಲ್ಲಿಯೂ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.ಕೆಂಪೇಗೌಡರ ಜೀವನ, ಸಾಧನೆ, ಕೊಡುಗೆಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, ಗೀತ ಗಾಯನ ಹಮ್ಮಿಕೊಳ್ಳಲಾಗುವುದು. ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ನಾಗವೇಣಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಡಿವೈಪಿಸಿ ವೆಂಕಟೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಒ.ಎಲ್.ಮಂಜುಕುಮಾರ್, ಕಾರ್ಯದರ್ಶಿ ಜಗನ್ನಾಥ್, ನಿರ್ದೇಶಕರಾದ ಪರಮೇಶ್ವರ, ಜಿ.ದ್ಯಾಮಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.