- ಜಿಪಂ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಿಇಒ ಮುಖೇನ ಸರ್ಕಾರಕ್ಕೆ ಮನವಿ - - -
- ಸರ್ಕಾರದಿಂದಲೇ ನೌಕರರು ತರಬೇತಿ ಪಡೆದಿದ್ದು, ವರ್ಷಪೂರ್ತಿ ಕೆಲಸ ಕೊಡಬೇಕು
- ಕನಿಷ್ಠ ₹26 ಸಾವಿರ ವೇತನ ನಿಗದಿಪಡಿಸಿ, ಸೇವೆ ಕಾಯಂಗೊಳಿಸಬೇಕು
ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನೀಡಿಕೆ, ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವೀಕರಣ, ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಪಂ ಸ್ವಚ್ಛವಾಹಿನಿ ಆಟೋ ಚಾಲಕರು ಮತ್ತು ಸಹಾಯಕಿಯರ ಸಂಘ ಸದಸ್ಯರು ಸಿಐಟಿಯು ಜಿಲ್ಲಾ ಘಟಕ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ ಮಾತನಾಡಿ, ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರು ಕಸ ವಿಲೇವಾರಿ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಕಸ ಬೇರ್ಪಡಿಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರದ ಸ್ವಚ್ಛಭಾರತ ಅಭಿಯಾನ ಯಶಸ್ಸಿಗೆ ಈ ಮಹಿಳೆಯರ ಕೊಡುಗೆ ಇದೆ. ಗ್ರಾಮಗಳ ಸ್ವಚ್ಛತೆ ಜವಾಬ್ದಾರಿ ಹೊತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಮೂಲಸೌಲಭ್ಯ ಮರೀಚಿಕೆಯಾಗಿವೆ ಎಂದರು.
ಸ್ವಚ್ಛತಾ ಕೆಲಸ ಕಾಯಂ ಸ್ವರೂಪದ ಸೇವೆಯಾಗಿದ್ದು, ಕನಿಷ್ಠ ₹26 ಸಾವಿರ ವೇತನ ನಿಗದಿಪಡಿಸಿ, ಸೇವೆ ಕಾಯಂಗೊಳಿಸಬೇಕು. ಸರ್ಕಾರದಿಂದ ತರಬೇತಿ ಪಡೆದ ಮಹಿಳಾ ಚಾಲಕರಿಗೆ ಈವರೆಗೆ ಆಟೋ ನೀಡಿಲ್ಲ. ಕೆಟ್ಟು ನಿಂತ ಆಟೋ ದುರಸ್ತಿ ಮಾಡಿಸಿಲ್ಲ. ಸ್ವಚ್ಛವಾಹಿನಿ ಮಹಿಳೆಯರ ಕುಂದುಕೊರತೆ ಚರ್ಚಿಸುವ ಸಮಿತಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆ ಅನಿವಾರ್ಯವಾಗಿ ಹೋರಾಟ ನಡೆಸಲಾಗುತ್ತಿದೆ. ನೌಕರರ ಬೇಡಿಕೆ ಶೀಘ್ರ ಈಡೇರಿಸದಿದ್ದರೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ಆನಂದರಾಜ ಎಚ್ಚರಿಸಿದರು.
ಸಂಘದ ಕರಿಯಮ್ಮ, ರೂಪ, ಗೀತಮ್ಮ, ಸುಧಾಮಣಿ, ಜಯಲಕ್ಷ್ಮೀ, ರೇಖಮ್ಮ, ಶೃತಿ, ಮಂಜುಳ, ಪ್ರೇಮ, ಹಿರಿಯಮ್ಮ, ನಳಿನ ಸೇರಿದಂತೆ ಸ್ವಚ್ಛತಾ ಸಿಬ್ಬಂದಿ ಇದ್ದರು.
ಸ್ವಚ್ಛವಾಹಿನಿ ನೌಕರರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಒತ್ತಾಯಿಸಿ ದಾವಣಗೆರೆ ಜಿಪಂ ಕಚೇರಿ ಎದುರು ರಾಜ್ಯ ಗ್ರಾಮ ಪಂಚಾಯತಿ ಸ್ವಚ್ಛವಾಹಿನಿ ಆಟೋ ಡ್ರೈವರ್ಸ್ ಮತ್ತು ಸಹಾಯಕಿಯರ ಸಂಘ ಸದಸ್ಯರು ಪ್ರತಿಭಟನೆ ನಡೆಸಿದರು.