ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ನೂತನ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ತೀರ ಹದಗೆಟ್ಟು ಸಾರ್ವಜನಿಕರ ಸಂಚಾರಕ್ಕೆ ಅಸಾಧ್ಯವಾಗಿದ್ದ ರಾಜ್ಯ ಹೆದ್ದಾರಿ 112ರ ಬೇಲೂರು–ಸೋಮವಾರಪೇಟೆ ರಸ್ತೆಯನ್ನು ಬಾಳ್ಳುಪೇಟೆಯಿಂದ ಜಮ್ಮನಹಳ್ಳಿ ತನಕ ಸುಮಾರು 3 ಕಿ.ಮೀ. ಉದ್ದದಲ್ಲಿ ₹10 ಕೋಟಿ ಅನುದಾನದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. ಈ ಯೋಜನೆಯಡಿ 7 ಮೀಟರ್ ಅಗಲದ ದ್ವಿಪಥ ರಸ್ತೆ ನಿರ್ಮಾಣ, 5 ಮೋರಿಗಳ ನಿರ್ಮಾಣ, ಬಾಳ್ಳುಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಮೋರಿ ಹಾಗೂ ಆಯ್ದ ಭಾಗಗಳಲ್ಲಿ ಚರಂಡಿ ನಿರ್ಮಾಣ, ರಸ್ತೆ ಸುರಕ್ಷತಾ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾಮಗಾರಿ ವೀಕ್ಷಣೆ ವೇಳೆ ಕೆಲವು ಸ್ಥಳಗಳಲ್ಲಿ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸಿಮೆಂಟ್ ಮಂಜು, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸರಕಾರದ ಅನುದಾನ ಸದ್ಬಳಕೆಯಾಗುವಂತೆ ಎಲ್ಲರೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಿಳಿಸಿದರು.ಇಲಾಖೆಗಳ ನಡುವೆ ಸಮನ್ವಯ ಕೊರತೆ ಕಂಡುಬಂದರೆ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಅವರು, ಲೋಕೋಪಯೋಗಿ ಇಲಾಖೆ ಹಾಗೂ ಚೆಸ್ಕಾಂ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮುರುಗೇಶ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.==========
ಫೋಟೋ:ಬಾಳ್ಳುಪೇಟೆ ಸಮೀಪ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಶಾಸಕ ಸಿಮೆಂಟ್ ಮಂಜು ವೀಕ್ಷಣೆ ಮಾಡಿದರು