ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ನಡೆದ ಹುಲಿ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಹಸುವನ್ನು ತಿಂದು ಹಾಕಿದ್ದಕ್ಕೆ ಪ್ರತೀಕಾರವಾಗಿ ಆರೋಪಿಗಳು ಸತ್ತ ಹಸುವೊಂದಕ್ಕೆ ವಿಷ ಬೆರೆಸಿದ್ದರು. ಅದನ್ನು ತಿಂದು ಹುಲಿ ಸಾವಿಗೀಡಾಗಿತ್ತು. ಕೊಡಲಿ ಬಳಸಿ ಅದನ್ನು ಮೂರು ತುಂಡು ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲ, ಗಣೇಶ್, ಗೋವಿಂದೇಗೌಡ, ಸಂಪು ಬಂಧಿತರು. ಭಾನುವಾರ ಬೆಳಗ್ಗೆ ಅವರಿಗೆ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಸ್ಥಳ ಮಹಜರು ಮಾಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ, ಹಸುವಿನ ಮಾಲಿಕ ಚಂದ್ರು ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಜೊತೆಗೆ, ಮಂಜುನಾಥ್ ಮತ್ತು ಕಂಬಣ್ಣ ಎಂಬ ಇಬ್ಬರು ಕುರಿಗಾಹಿಗಳನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪ್ರತೀಕಾರದ ಹತ್ಯೆ:
ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದರಿಂದ ರೊಚ್ಚಿಗೆದ್ದು, ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಚಂದ್ರುವಿನ ಮನೆಯ ಹಸುವನ್ನು ಹುಲಿ ಕೊಂದು, ಭಕ್ಷಣೆ ಮಾಡಿತ್ತು. ಇದರಿಂದ ರೊಚ್ಚಿಗೆದ್ದ ಚಂದ್ರು, ಹುಲಿಗೆ ಒಂದು ಗತಿ ಕಾಣಿಸಲು ಮುಂದಾದ. ಉಳಿದವರ ಜೊತೆ ಸೇರಿ ಬೇಟೆಯಾಡಿದ್ದ ಹಸುವಿಗೆ ವಿಷ ಬೆರೆಸಿದ್ದ. ಅದೇ ಹಸುವನ್ನು ತಿಂದು ಹುಲಿ ಸಾಯುವಂತೆ ಮಾಡಿದ್ದ. ನೀರು ಹರಿಯುವ ಹಳ್ಳದಲ್ಲಿ ಹುಲಿ ಸತ್ತು ಬಿದ್ದಿತ್ತು. ಬಳಿಕ, ಎಲ್ಲರೂ ಸೇರಿ ಕೊಡಲಿಯಿಂದ ಕಳೆಬರವನ್ನು ಮೂರು ತುಂಡು ಮಾಡಿ, ಎರಡು ಪೀಸ್‌ಗಳನ್ನು ಮಣ್ಣಿನಲ್ಲಿ ಹುದುಗಿಸಿ, ಇನ್ನೊಂದನ್ನು ದೂರದಲ್ಲಿ ಎಲೆಯಿಂದ ಮುಚ್ಚಿಟ್ಟಿದ್ದರು. ಅಲ್ಲದೆ, ಹುಲಿಯ ಮೃತದೇಹವನ್ನು ಸುಟ್ಟು ಅಥವಾ ಮಣ್ಣಿನಲ್ಲಿ ಹೂತು, ನಾಶ ಮಾಡಲು ಯೋಜಿಸಿದ್ದರು. ಅಷ್ಟರಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಹುಲಿಯ ಮೃತದೇಹ ಕಂಡು ಬಂದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.