ಕನ್ನಡಪ್ರಭ ವಾರ್ತೆ ಮಂಡ್ಯ ಸಾಮಾಜಿಕ ಪರಿಕಲ್ಪನೆಯಲ್ಲಿ ಬದಲಾವಣೆ ತರಲು ಕೇವಲ ಭಕ್ತಿ ಮಾರ್ಗವೊಂದೇ ಅಲ್ಲ, ಕಾಯಕ ಮಾರ್ಗವನ್ನು ಆಯ್ಕೆ ಮಾಡಬಹುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್. ಶೈಲಜಾ ಹೇಳಿದರು.
ಒಬ್ಬ ಮಲೆನಾಡಿನ ಪ್ರಾಂತ್ಯದಿಂದ ಬಂದಂತಹ ವ್ಯಕ್ತಿ ಇಡೀ ವಿಶ್ವಕ್ಕೆ ಆಧುನಿಕ ಬದುಕಿಗೆ ಬೇಕಾದಂತಹ ಕಾಯಕ ಯೋಜನೆಯ ಮಹತ್ವವನ್ನು ಸಾರಿದ ಕನ್ನಡ ಸಾಂಸ್ಕೃತಿಕ ಪ್ರಜ್ಞೆಯನ್ನು ಅನಂತ ವಿಶ್ವದೆಡೆಗೆ ಕೊಂಡೊಯ್ದ ಕುವೆಂಪುರವರ ಸಾಹಿತ್ಯವನ್ನು ಎಲ್ಲರೂ ಮನನ ಮಾಡಿಕೊಳ್ಳಬೇಕು ಎಂದರು.
ಸಾಹಿತ್ಯ ವಿದ್ಯಾರ್ಥಿಗಳು, ಸಾಹಿತಿಗಳು, ಅಧ್ಯಾಪಕರಷ್ಟೇ ಅವರ ಸಾಹಿತ್ಯವನ್ನು ಓದುವುದು, ಅಧ್ಯಯನ ಮಾಡುವುದರ ಜೊತೆಗೆ ಸಾಮಾನ್ಯರೂ ಸಹ ಅವರ ಸಾಹಿತ್ಯವನ್ನು ಓದುವಂತಹ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಲ್ಲಿ ಮನುಜಮತ ವಿಶ್ವಪಥ ಎಂದು ಜಗತ್ತಿಗೆ ಸಾರಿದ ಅವರ ಆಶಯಗಳು ವ್ಯಕ್ತವಾಗುತ್ತವೆ ಎಂದರು.ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲೂ ಅದಕ್ಕೆ ತಕ್ಕುದಾದ ಕೆಲಸವನ್ನು ಸಾಧಿಸಿ ತೋರಿಸಿದರು. ಮೈಸೂರು ಅರಸರು ವಿವಿಗೆ ನೀಡಿದ್ದ ಜಾಗದ ಜೊತೆಗೆ ಕುಕ್ಕರಹಳ್ಳಿ ಕೆರೆಯನ್ನೂ ಸಹ ವಿವಿಯ ಆಸ್ತಿಗೆ ಸೇರಿಸಿಕೊಂಡು ೮೩೦ ಎಕರೆಯ ವಿಶಾಲ ಭೂಮಿಯನ್ನು ಮೈಸೂರು ವಿವಿಗೆ ಸ್ವಾಧೀನ ಮಾಡಿಕೊಟ್ಟು ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುವಂತೆ ಮಾಡಿದವರು ಕುವೆಂಪು ಎಂದು ಬಣ್ಣಿಸಿದರು.
ಕುವೆಂಪುರವರು ಇದ್ದಷ್ಟು ದಿನವೂ ತಮ್ಮ ಮಾತು, ಕೃತಿಗೂ ಬದಲಾವಣೆ ಇಲ್ಲದಂತೆ ನಡೆದುಕೊಂಡರು. ಅವರ ಸಾಹಿತ್ಯ, ವಿಚಾರಧಾರೆಗಳು ಹೆಚ್ಚೆಚ್ಚು ಜನರಿಗೆ ತಿಳಿಯುವಂತಾಗಬೇಕು. ವಿದ್ಯಾರ್ಥಿಗಳು ಹೆಚ್ಚು ಪ್ರಚಾರ ಮಾಡಬೇಕು. ಇಂತಹ ಸಂಘಟನೆಗಳಿಂದ ಹೆಚ್ಚು ಕಾರ್ಯಕ್ರಮಗಳು ಆಗಬೇಕು ಎಂದು ಸಲಹೆ ನೀಡಿದರು.
ಈಗ ಜಾತಿಗೊಬ್ಬ ಜಗದ್ಗುರುಗಳಾಗಿದ್ದಾರೆ. ಬೇರೆ ಬೇರೆ ಜಾತಿಯವರು ಜಗದ್ಗುರುಗಳನ್ನು ಇಟ್ಟುಕೊಂಡು ಏನೆಲ್ಲಾ ಮಾಡುತ್ತಿದ್ದಾರೆ. ಲಾಭದ ಪ್ರಶ್ನೆ ಬಂದಾಗ ಮಠ ಬೇಕಾಗುತ್ತದೆ. ಅಲ್ಲಿಗೊಬ್ಬ ಗುರು ಬೇಕಾಗುತ್ತಾನೆ. ಜಗದ್ಗುರು ಎನಿಸಿಕೊಳ್ಳಬೇಕಾಗುತ್ತದೆ. ಅಂದುಕೊಂಡಾಗ ಮಠದ ಸುತ್ತಮುತ್ತ ನಡೆಯುವ ಅನಾಚಾರಗಳ ಭಾಗವಾಗದರೆ, ಕುವೆಂಪುರವರ ವೈಚಾರಿಕ ಶಕ್ತಿಯಿಂದ ನೋಡಿದಾಗ ಅನಾಚಾರ ಎಂದು ಗೋಚರಿಸುತ್ತದೆ ಎಂದರು.