ಹೊಸಪೇಟೆ: ಸಮಾಜ ವ್ಯವಸ್ಥೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ರಥೋತ್ಸವಗಳು ನಡೆಯುತ್ತವೆ ಎಂದು ಕೊಟ್ಟೂರು ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.
ಎಲ್ಲ ಸಮಾಜಗಳು ಒಗ್ಗೂಡಿ ತೇರನ್ನು ಎಳೆಯುತ್ತವೆ. ಅದರಲ್ಲೂ ಕೊಟ್ಟೂರುಸ್ವಾಮಿ ಮಠದ ಸರ್ವಧರ್ಮ ಸಮನ್ವಯ ಮಹಾರಥೋತ್ಸವವು ಸರ್ವಧರ್ಮಗಳನ್ನು ಒಳಗೊಂಡಿದೆ. ಸರ್ವ ಸಮಾಜದವರ ಉತ್ಸವ ಇದಾಗಿದೆ. ಮನುಷ್ಯ ಜನ್ಮ ಅಪರೂಪವಾದದ್ದು. ಜನ್ಮ ಜನ್ಮಗಳ ಪುಣ್ಯದ ಫಲವಾಗಿ ಲಭಿಸಿದ ಈ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಕುಟುಂಬ ವ್ಯವಸ್ಥೆಯು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕುಟುಂಬಗಳಲ್ಲಿ ಒಗ್ಗಟ್ಟಿಲ್ಲ. ಇಂದು ಭಾರತೀಯ ಸಂಸ್ಕೃತಿಯ ತಹಳದಿಯಾದ ಕುಟುಂಬ ವ್ಯವಸ್ಥೆ ಸಂಕುಚಿತಗೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದೆ. ಕೂಡು ಕುಟುಂಬದ ಕಲ್ಪನೆ ಬಲಗೊಳ್ಳಬೇಕಿದೆ ಎಂದರು.ಈ ಹಿಂದೆ ಕೂಡು ಕುಟುಂಬಗಳಿದ್ದವು. ಆ ಕುಟುಂಬಗಳಲ್ಲಿ ಬೆಸುಗೆ ಇರುತ್ತಿತ್ತು. ಇಂದು ಕುಟುಂಬ ಎಂದರೆ ಗಂಡ-ಹೆಂಡತಿ ಎಂಬುದಷ್ಟೇ ಸೀಮಿತವಾಗಿದೆ. ಗಂಡ- ಹೆಂಡತಿ ನಡುವೆ ವಿರಸ ಬಂದಾಗ ತಿಳಿಹೇಳಲು ಮನೆಯಲ್ಲಿ ಹಿರಿಯರಿಲ್ಲದೇ ಇಬ್ಬರೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸಬೇಕು. ಹೊಟೇಲ್ ಆಹಾರ ಸಂಸ್ಕೃತಿ ಹೆಚ್ಚುತ್ತಿದೆ. ಮನೆಯಲ್ಲಿ ಸಿದ್ಧಪಡಿಸಿದ ಆಹಾರವೇ ಆರೋಗ್ಯಕ್ಕೆ ಉತ್ತಮವಾಗಿದೆ. ನಿತ್ಯ ಮಾತ್ರೆ ನುಂಗದೇ ನಿದ್ದೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ನಾವು ಎಷ್ಟೇ ಸಂಪಾದಿಸಿದರೂ ಅದು ಆಸ್ಪತ್ರೆ ಪಾಲಾದರೆ ಬದುಕಿಗೆ ಅರ್ಥವಿರುವುದಿಲ್ಲ. ಮುಂದಿನ ನಮ್ಮ ಪೀಳಿಗೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವುದು ಅನಿರ್ವಾಯವಾಗಿದೆ ಎಂದರು.
ಡೋಣಿ ಗದಗದ ಹಿರೇಮಠದ ಶಶಿಧರ ಶಾಸ್ತ್ರಿಗಳು ಪ್ರವಚನ ಮಂಗಲ ನುಡಿ ನುಡಿದರು. ಸುರೇಶ ಕುಮಾರ ಮತ್ತು ಸಿದ್ಧಲಿಂಗೇಶ ಅವರು ಸಂಗೀತ ಸಾಥ್ ನೀಡಿದರು.