ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕಂದವಾರ ಕೆರೆಯ ಬಳಿಗೆ ಮಾಧ್ಯಮದವರೊಂದಿಗೆ ಎಚ್.ಎನ್.ವ್ಯಾಲಿ ನೀರಿನಿಂದಾಗುವ ಅಪಾಯಗಳನ್ನು ತಿಳಿಸಿದ ನಂತರ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್.ಎನ್.ವ್ಯಾಲಿ ನೀರು ಕೃಷಿಗೆ ಮತ್ತು ಕುಡಿಯಲು ಯೋಗ್ಯವಲ್ಲ. ಯಾರಾದರೂ ಈ ನೀರನ್ನು ಅಕ್ರಮವಾಗಿ ಬಳಸಿಕೊಂಡರೆ ದಂಡ ವಿಧಿಸಲಾಗುವುದು ಎಂದು ಬೋರ್ಡ್ ಹಾಕಿರುವುದು ಸರಿಯಾಗಿದೆ. ಏಕೆಂದರೆ ಎಚ್.ಎನ್,ವ್ಯಾಲಿ ನೀರು ಸಂಗ್ರಹ ಮಾಡಿರುವ ಕಂದವಾರ ಕೆರೆಯ ದಂಡೆಯ ಉದ್ದಕ್ಕೂ 7- 8 ಕೊಳವೆ ಬಾವಿಗಳು ಅಂತರ್ಜಲವಿಲ್ಲದೆ ಹಾಳಾಗಿದ್ದವು. ಯಾವಾಗ ಇಲ್ಲಿಗೆ ನೀರು ಬಂತೋ ಆಗ ಬತ್ತುತ್ತಿದ್ದ ಇವುಗಳ ಒಡಲಿನ ತುಂಬಾ ನೀರುಕ್ಕಿ ಹರಿಯುತ್ತಿದೆ. ಇದೇ ನೀರನ್ನು ನಗರಾಡಳಿತ ಹಿಂದೆ ಮುಂದೆ ನೋಡದೆ ನೇರವಾಗಿ ನಗರವಾಸಿಗಳಿಗೆ ಕುಡಿಯಲು ಹರಿಸಿ ಅವರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ಯಾಕೆ? ಕುಡಿಯಲು ಯೋಗ್ಯವಲ್ಲ ಎಂದು ಬೋರ್ಡ್ ಹಾಕಿದ್ದರೂ ಯಾಕೆ ಜನತೆಗೆ ಕುಡಿಯಲು ಕೊಡುತ್ತಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು, ಸರ್ಕಾರ ತಿಳಿಸಬೇಕು ಎಂದು ಪ್ರಶ್ನಿಸಿದರು.
ಎಚ್.ಎನ್. ವ್ಯಾಲಿ ನೀರನ್ನು ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಿದ ಪರಿಣಾಮ ಜನರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ತಪ್ಪು ತಿದ್ದಿಕೊಳ್ಳಲು 3 ವರ್ಷಗಳ ಕಾಲ ಅವಕಾಶ ನೀಡಲಾಗಿದೆ. ಆದರೂ ತಿದ್ದಿಕೊಂಡಿಲ್ಲ, ಸುಮ್ಮನೆ ಕೂತರೆ ಅಮಾಯಕ ಜನ ಸಾಯುತ್ತಾರೆ. ಹೀಗಾಗಿ ಹಲವು ಸಂಘ- ಸಂಸ್ಥೆಗಳ ಜತೆಗೂಡಿ ಚಿಕ್ಕಬಳ್ಳಾಪುರ ಬಂದ್‌ಗೆ ಕರೆ ನೀಡಲಾಗಿದೆ. ಇದೊಂದು ಪಕ್ಷಾತೀತ, ಧರ್ಮಾತೀತ, ಹೋರಾಟವಾಗಿದೆ ಎಂದು ಸ್ಪಷ್ಟಪಡಿಸಿದರು.ಬಜೆಟ್‌ಗೆ ಮುನ್ನ ಎಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಅನುದಾನ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ತಪ್ಪಿದ್ದಲ್ಲಿ ಹೋರಾಟ ಮಾಡುವ ಎಚ್ಚರಿಕೆ ಕೂಡ ರವಾನಿಸಲಾಗಿತ್ತು. ಆದರೂ ಸರ್ಕಾರ ಇತ್ತ ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ತಾಳಿದೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಇತ್ತ ಗಮನ ಹರಿಸಿಲ್ಲದಿರುವುದು ಬೇಸರ ತರಿಸಿದೆ. ಹೀಗಾಗಿ ಜನರ ಆರೋಗ್ಯ ಮತ್ತು ಶುದ್ಧ ನೀರಿಗಾಗಿ ಆಗ್ರಹಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್ ರೆಡ್ಡಿ, ಅಣಕನೂರು ವೆಂಕಟೇಶಪ್ಪ, ಬಾಬು, ಶಿವಕುಮಾರ್, ರಮೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಬಾಲು, ಮುರಳಿ, ಅಮ್ಮ ಎಜುಕೇಷನಲ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಗೊಳ್ಳು ಶ್ರೀನಿವಾಸ್, ಮಂಜುನಾಥ್ ರೆಡ್ಡಿ, ಶ್ರೀ ರಾಮಪುರ ಶಶಿ, ಅರವಿಂದ ಮತ್ತಿತರರು ಇದ್ದರು.
--------ಸ್ಥಳೀಯ ಶಾಸಕರು ಗಮನಹರಿಸಲಿ
ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ತಮ್ಮ ಕ್ಷೇತ್ರದ ಜನರಿಗೆ ಗುಣಮಟ್ಟದ ನೀರು ಒದಗಿಸುವತ್ತ ಗಮನ ಹರಿಸಬೇಕು. ತಮ್ಮ ಪಕ್ಷದ ನಾಯಕರ ಮೇಲಿರುವ ಪ್ರೀತಿಯಂತೆ ಕ್ಷೇತ್ರದ ಜನರ ಮೇಲೂ, ಅವರ ಆರೋಗ್ಯದ ಮೇಲೂ ಕಾಳಜಿ ತೋರಿಸಬೇಕು. ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಕುರಿತು ಅವರು ಹೋರಾಟಕ್ಕೆ ಕರೆ ನೀಡಿದರೆ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ನಾವು ಭರಿಸಿ, ಅವರೊಂದಿಗೆ ಭುಜಕ್ಕೆ ಭುಜ ಕೊಟ್ಟು ಹೋರಾಟ ನಡೆಸಲು ಸಿದ್ಧವಿದ್ದೇವೆ. ಅವರು ಬಯಸಿದರೆ ಮುಖ್ಯಮಂತ್ರಿಗಳ ಕಾಲು ಹಿಡಿದಾದರೂ 3ನೇ ಹಂತದ ಶುದ್ಧೀಕರಣ ಮಾಡಲು ಅನುದಾನ ಮೀಸಲಾಗಿಡಿ ಎಂದು ಪ್ರಾರ್ಥಿಸಲಾಗುವುದು ಎಂದು ಸಂದೀಪ್ ಬಿ.ರೆಡ್ಡಿ ತಿಳಿಸಿದರು.