ಕನ್ನಡಪ್ರಭ ವಾರ್ತೆ, ತುಮಕೂರುಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆಗೆ ಮೀಸಲಾಗದೆ, ಅನುಕರಣೆಯಾಗಬೇಕು. ಸಮಾಜದ ಸಮಗ್ರ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾದದ್ದು. ಈ ನಿಟ್ಟಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ ಪ್ರದೀಪ್ ಕುಮಾರ್ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಶಾ ಪ್ರಸನ್ನಕುಮಾರ್ ಮಾತನಾಡಿ, ಮಹಿಳಾ ಆರ್ಥಿಕ ಸ್ವಾವಲಂಬನೆ ಎಂಬುದು ಕೇವಲ ಮಹಿಳೆಯ ಸ್ವಾಭಿಮಾನ ಅಥವಾ ಅವಳ ಸ್ವಾವಲಂಬನೆ ಅಲ್ಲ. ಅದು ಒಂದು ಕುಟುಂಬದ, ಸಮಾಜದ ಹಾಗೂ ಸಮುದಾಯದ ಸ್ವಾವಲಂಬನೆ ಆಗಿರುತ್ತದೆ.ಇದರಿಂದಾಗಿ ದೇಶದ ಆರ್ಥಿಕತೆಗೂ ಸಹಾಯವಾಗುತ್ತದೆ ಎಂದರು. ಡಾ.ಅನುಷಾ ಜಗದೀಶ್ಕು ಮಾತನಾಡಿ, ಮಹಿಳಾ ದಿನಾಚರಣೆಯು ಕೇವಲ ಔಪಚಾರಿಕ ಆಚರಣೆ ಆಗದೇ, ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವಿಸುವುದರಿಂದ ಪ್ರಾರಂಭವಾಗಬೇಕು.ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ವಾತಾವರಣ ಸೃಷ್ಟಿಸುವಂತಾಗಬೇಕು. ಪ್ರಸ್ತುತದಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳು ಬಹಳಷ್ಟಿವೆ. ಆ ಅವಕಾಶಗಳನ್ನು ಬಳಸಿಕೊಂಡು, ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕನ್ನಡ ಚಲನಚಿತ್ರದ ಹಿರಿಯ ನಟ ದೊಡ್ಡಣ್ಣ ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ಮಹತ್ವ ಕುರಿತು ಮಾತನಾಡಿ ಮಹಿಳೆಯರಿಗೆ ನಮ್ಮ ಭಾಷೆ ಹಿಂದಿನಿಂದಲೂ ಮಹತ್ವವನ್ನು ಹೊಂದಿದೆ. ಉದಾಹರಣೆ ಮಾತೃಭಾಷೆ, ಭೂಮಿತಾಯಿ ಎಂಬ ಪದಗಳಲ್ಲಿ ನಮ್ಮ ಸಂಸ್ಕೃತಿ ಹಾಗೂ ಹೆಣ್ಣಿಗೆ ಕೊಡುವ ಗೌರವ ತಿಳಿದು ಬರುತ್ತದೆ. ಸಕಲವೂ ಹೆಣ್ಣಿನಿಂದಲೇ ಎಂದು ತಿಳಿಸಿದರು. ಈ ಕಾರ್ಯ್ಕ್ರಮದಲ್ಲಿ ವಿದ್ಯಾವಾಹಿನಿ ಸಂಸ್ಥೆಯ ಸಂಸ್ಥಾಪಕ ಕೆ.ಬಿ ಜಯಣ್ಣರವರು, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ ಎ, ವಿಶ್ವ ದಾಖಲೆ ಸಾಧಿಸಿದ ಸಾಧಕಿ ಸರಸ್ವತಿ , ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.