ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮುಂಜಾನೆಯಿಂದಲೇ ದೇವಾಲಯಗಳತ್ತ ತೆರಳಿದ ಭಕ್ತರು, ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ನೈವೇದ್ಯಗಳನ್ನು ಅರ್ಪಿಸುವ ಜೊತೆಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ, ನಂದಿ, ಚಿಂತಾಮಣಿ, ಗೌರಿಬಿದನೂರು, ಕೈವಾರ, ಇಶಾ ಕೇಂದ್ರ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಶಿವಪಾರ್ವತಿ, ಈಶ್ವರ ಹಾಗೂ ಇನ್ನಿತರ ದೇವಾಲಯಗಳನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಗಳ ಆವರಣದಲ್ಲಿ ಹಾಗೂ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ತಾಲೂಕಿನ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ನಂದೀಶ್ವರನಿಗೆ ವಿಶೇಷ ಪೂಜೆಗಳು ನಡೆದವು. ಭೋಗನಂದೀಶ್ವರನಿಗೆ ಏಕವಾರ ಅಭಿಷೇಕ, ಕ್ಷೀರಾಭಿಷೇಕ, ತುಪ್ಪಾಭಿಷೇಕ, ಗಂಧಾಬಿಷೇಕ, ಪುಷ್ಪಾಭಿಷೇಕ ನಡೆಯಿತು. ಹಾಗೆಯೇ ದೇವಾಲಯದ ಆವರಣದಲ್ಲಿ ಮಹಿಳೆಯರು ದೀಪಗಳನ್ನು ಬೆಳಗಿ ಹರಿಕೆ ತೀರಿಸಿಕೊಂಡರು.ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ ಸೇರಿದಂತೆ ಜಿಲ್ಲೆ ಹಾಗೂ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಲ್ಲದೆ, ಸಾಲಾಗಿ ನಿಂತು ಭೋಗನಂದೀಶ್ವರನ ದರ್ಶನವನ್ನು ಕೂಡ ಪಡೆದರು. ಹಣವಿರುವವರು ವಿಶೇಷ ದರ್ಶನದ 250 ರು.ಗಳ ಟಿಕೆಟ್ ಪಡೆದು ದರ್ಶನ ಪಡೆದರು. ದೇವಾಲಯದ ಒಳಗಡೆಯಿರುವ ಬೃಹತ್ ಕಲ್ಯಾಣಿಯಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ನೆರೆವೇರಿಸಿದರು.
ದೇವಾಲಯದಲ್ಲಿ ವಿವಿಧ ಕಲಾ ತಂಡಗಳಿಂದ ಭಜನೆ, ಸಂಗೀತ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಂದಿ ದೇವಾಲಯದ ಆಡಳಿತ ಮಂಡಳಿಯಿಂದ ಪ್ರಸಾದ ವಿನಿಯೋಗವೂ ನಡೆಯಿತು.
ನಂದಿ ಗ್ರಾಮದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ಧ ದೇವಾಲಯದ ಆವರಣದಲ್ಲಿ ಭೋಗನಂದೀಶ್ವರ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆಯ ಮರುದಿನ ಶನಿವಾರ ಶಿವಪಾರ್ವತಿ ಹಾಗೂ ಗಣೇಶ ಮೂರ್ತಿಗಳ ಜೋಡಿ ರಥೋತ್ಸವ ನಡೆಯುವುದು ವಾಡಿಕೆ. ಜೋಡಿ ರಥೋತ್ಸವಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ.
ಚಿಕ್ಕಬಳ್ಳಾಪುರ ನಗರ ಎಂ.ಜಿ. ರಸ್ತೆಯ ಶ್ರೀ ಮರಳು ಸಿದ್ಧೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬ ಆಚರಣೆ ವಿಜೃಂಭಣೆಯಿಂದ ನಡೆಯಿತು. ದೇವಾಲಯ ಸೇವಾ ಸಮಿತಿ ಹಾಗೂ ಭಕ್ತಾಗಳಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹಮ್ಮಿಕೊಂಡಿದ್ದ ಉತ್ಸವದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ಪೂಜೆ, ಅಭಿಷೇಕ, ಗಣಪತಿ ಪೂಜೆ, ಮಹಾಗಣಪತಿ ಪುರಸರ ನವಗ್ರಹ ಹೋಮ, ಸುದರ್ಶನ ಹೋಮ, ಮಹಾಪೂರ್ಣಾಹುತಿ ಅಲಂಕಾರ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಮಹಿಳೆಯರು, ಮಕ್ಕಳು, ಕುಟುಂಬ ಸಮೇತರಾಗಿ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಆದಿಯೋಗಿ ದರ್ಶನಕ್ಕೆ ಆಗಮಿಸಿದ್ದ ಭಕ್ತರ ದಂಡು;