ಶಿಕ್ಷಣದ ಹಕ್ಕು ಕಿತ್ತುಕೊಳ್ಳುವ ಬಾಲಕಾರ್ಮಿಕ ಪದ್ಧತಿ ಕೊನೆ ಆಗಲಿ: ಜಿಲ್ಲಾಧಿಕಾರಿ ಇಟ್ನಾಳ

KannadaprabhaNewsNetwork |  
Published : Jun 13, 2026, 02:15 AM IST
12ಕೆಪಿಎಲ್1:ಕೊಪ್ಪಳ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ಘಾಟನೆ ಜರುಗಿತು.  | Kannada Prabha

ಸಾರಾಂಶ

ಮಕ್ಕಳ ಶಿಕ್ಷಣದ ಹಕ್ಕು ಹಾಗೂ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಬಾಲಕಾರ್ಮಿಕ ಪದ್ಧತಿ ಕೊನೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ ಇಟ್ನಾಳ ಹೇಳಿದರು.

ಕೊಪ್ಪಳ: ಮಕ್ಕಳ ಶಿಕ್ಷಣದ ಹಕ್ಕು ಹಾಗೂ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಬಾಲಕಾರ್ಮಿಕ ಪದ್ಧತಿ ಕೊನೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ ಇಟ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಮಗುವಿನ ಕಾನೂನುಬದ್ಧವಾದ ಹಕ್ಕಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರಿಂದ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗುತ್ತದೆ. ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪೀಡುಗಾಗಿದ್ದು, ಇದರಿಂದ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದರು.

ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ಮಕ್ಕಳು ಪ್ರತಿ ವರ್ಷ ದಾಖಲಾಗುತ್ತಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಪ್ರಾಥಮಿಕ ಶಾಲಾ ಹಂತದ ಬಳಿಕ ಮುಂದಿನ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣ ಹಂತಕ್ಕೆ ದಾಖಲಾಗುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಮಾಡಿ ಅವರನ್ನು ಪುನಃ ಶಾಲೆಗೆ ಸೇರಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಿದಂತಾಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಮಾತನಾಡಿ, ಮಕ್ಕಳು ಅನುಭವಿಸಬೇಕಾದ ಹಕ್ಕುಗಳನ್ನು ಕೊಡುವುದು ಮಕ್ಕಳ ತಂದೆ-ತಾಯಿ ಮತ್ತು ಸಮಾಜದಲ್ಲಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. 14 ವರ್ಷದ ವರೆಗೆ ಮಕ್ಕಳಿಗೆ ಊಟ, ಆಟ, ಪಾಠವನ್ನು ಅವರ ಇಚ್ಛೆಯಂತೆ ನೀಡಬೇಕು. ಮಕ್ಕಳು ತಮ್ಮ ಬಾಲ್ಯದ ವಯಸ್ಸಿನಲ್ಲಿ ಹೇಗಿರಬೇಕೋ ಹಾಗೆಯೇ ಇರುವಂತೆ ನೋಡಿಕೊಳ್ಳಬೇಕು. 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಂಡಲ್ಲಿ 2 ವರ್ಷ ಜೈಲು ಹಾಗೂ ₹50 ಸಾವಿರ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಮಾತನಾಡಿ, “ಬಾಲ ಕಾರ್ಮಿಕ ಪದ್ಧತಿಯ ತಡೆ: ಮಕ್ಕಳಿಗೆ ನ್ಯಾಯಯುತ ಆಟ, ವಯಸ್ಕರಿಗೆ ಯೋಗ್ಯ ಕೆಲಸ” ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ ಎಂದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ-2026ರ ಪ್ರಮಾಣ ವಚನ ಬೋಧಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಪರ ಉಪನಿರ್ದೇಶಕ ಅಮರೇಶ ಹಾವಿನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ-ಯುನಿಸೆಫ್ ಕೊಪ್ಪಳ ಸಂಯೋಜಕ ಹರೀಶ ಜೋಗಿ ಮಾತನಾಡಿದರು.

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಿಹೊಂದಿ, ಶಾಲೆಗೆ ದಾಖಲಾಗಿ 10ನೇ ತರಗತಿಯಲ್ಲಿ ಶೇ 75ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ₹2000ಗಳ ಪ್ರೋತ್ಸಾಹ ಧನ ಚೆಕ್ ನೀಡಲಾಯಿತು. ಬಾಲಕಾರ್ಮಿಕತೆಯಿಂದ ಮುಕ್ತರಾದ ಮಕ್ಕಳಿಗೆ ಮಾಲೀಕರಿಂದ ಬಾಲಕಾರ್ಮಿಕ ಕಲ್ಯಾಣ ನಿಧಿಗೆ ವಸೂಲಿ ಮಾಡಿ ಜಮಾ ಮಾಡಿದ ₹20 ಸಾವಿರ ಕಾರ್ಪಸ್ ನಿಧಿ ಹಾಗೂ ₹15 ಸಾವಿರ ಸರ್ಕಾರದ ವಂತಿಕೆ ಸೇರಿ ₹35 ಸಾವಿರ ಮೌಲ್ಯದ ಬಾಂಡ್‌ಗಳನ್ನು ವಿತರಿಸಿ ಸನ್ಮಾನಿಸಲಾಯಿತು. ಇತರೆ ಬಾಲ ಕಾರ್ಮಿಕರಿಗೆ ಪರಿಹಾರ ಧನ ಚೆಕ್ ವಿತರಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಬಸನಗೌಡ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಕಡಗದ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಕೊಪ್ಪಳ ವೃತ್ತದ ಕಾರ್ಮಿಕ ನಿರೀಕ್ಷಕಿ ಮಂಜುಳಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಮಕ್ಕಳು ಮತ್ತು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

40 ವರ್ಷ ಹಿಂದೆ ಸತ್ತವರ ಹೆಸರಲ್ಲಿ ಜಮೀನು ಮಾರಾಟ!
ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಲ್ಲರೂ ಕಾಳಜಿ ವಹಿಸಿ: ಡಿಸಿ ಸಿ.ಎನ್. ಶ್ರೀಧರ್