5 ವರ್ಷ 5 ತಿಂಗಳ ಮಗುವಿಗೂ1ನೇ ಕ್ಲಾಸ್‌ಗೆ ಸೇರಲು 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅವಕಾಶ

KannadaprabhaNewsNetwork |  
Published : Apr 17, 2025, 12:07 AM ISTUpdated : Apr 17, 2025, 07:22 AM IST
ಮಕ್ಕಳು | Kannada Prabha

ಸಾರಾಂಶ

ಒಂದನೇ ತರಗತಿ ದಾಖಲಾತಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಶಾಲಾ ಶಿಕ್ಷಣ ಇಲಾಖೆ 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ ಸಡಿಲಿಸಿದೆ. 

 ಬೆಂಗಳೂರು : ಒಂದನೇ ತರಗತಿ ದಾಖಲಾತಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಶಾಲಾ ಶಿಕ್ಷಣ ಇಲಾಖೆ 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ ಸಡಿಲಿಸಿದೆ. ಅದರಂತೆ ಬರುವ ಜೂ.1ಕ್ಕೆ 5 ವರ್ಷ 5 ತಿಂಗಳು ಪೂರ್ಣಗೊಳ್ಳುವ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಬಹುದು ಎಂದು ಆದೇಶಿಸಿದೆ.

ಆದರೆ, ಈ ಅವಕಾಶ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ-ಯುಕೆಜಿ) ಪೂರ್ಣಗೊಳಿಸಿರುವ ಮಕ್ಕಳಿಗೆ ಮಾತ್ರ ಅನ್ವಯಿಸಲಿದೆ ಎಂದು ತಿಳಿಸಲಾಗಿದೆ. ಕನಿಷ್ಠ ವಯೋಮಿತಿ ಸಡಿಲಿಕೆ ವಿಚಾರವಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬುಧವಾರ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ತಮ್ಮ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿ ಬಳಿಕ ವಯೋಮಿತಿ ಸಡಿಲಿಸುವುದಾಗಿ ಪ್ರಕಟಿಸಿದರು. 2026-27ನೇ ಶೈಕ್ಷಣಿಕ ಸಾಲಿನಿಂದ ಈ ರೀತಿ ವಿನಾಯ್ತಿ ಇರುವುದಿಲ್ಲ. ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ಜಾರಿಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಇದರ ಬೆನ್ನಲ್ಲೇ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ವಯೋಮಿತಿ ಸಡಿಲಿಕೆಗೆ ಪೋಷಕರಿಂದ ತೀವ್ರ ಒತ್ತಡ, ಮನವಿಗಳು ಬಂದಿದ್ದರಿಂದ ಈ ವಿಷಯ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಚೌಕಟ್ಟಿಗೆ ಒಳಪಟ್ಟಿದ್ದರಿಂದ ಇಲಾಖೆಯು ಎಸ್‌ಇಪಿ ಆಯೋಗದ ಸಲಹೆ ಕೇಳಿತ್ತು. ಆಯೋಗವು ಆರ್‌ಟಿಇ ಕಾಯ್ದೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-2020ರ ನಿಯಮಾನುಸಾರ 1ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕೆಂಬುದು ಅಗತ್ಯ ಹಾಗೂ ಔಚಿತ್ಯಪೂರ್ಣ. ವೈಯಕ್ತಿಕ ತೊಡಕುಗಳನ್ನು ಪರಿಗಣಿಸಿ ಶಿಕ್ಷಣ ನೀತಿ ಬದಲಿಸಲಾಗದು ಎಂದು ಹಾಗೂ ಈ ಅಂಶವನ್ನು ವಿವಿಧ ನ್ಯಾಯಾಲಯಗಳು ಎತ್ತಿ ಹಿಡಿದಿರುವುದಾಗಿ ವರದಿ ನೀಡಿದೆ. ಆದರೂ, 2025-26ನೇ ಸಾಲಿಗೆ ಮಾತ್ರ ಅನ್ವಯಿಸಿ ಪೂರ್ವ ಪ್ರಾಥಮಿಕ ತರಗತಿ ಪೂರ್ಣಗೊಳಿಸಿರುವ ಮಕ್ಕಳಿಗೆ ಮಾತ್ರ 6 ವರ್ಷಗಳಾಗಿರಬೇಕೆಂಬ ಕನಿಷ್ಠ ವಯೋಮಿತಿಗೆ ವಿನಾಯಿತಿ ನೀಡಬಹುದೆಂದು ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ 2025-26ನೇ ಸಾಲಿಗೆ ಮಾತ್ರ ಅನ್ವಯಿಸಿ 1ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕೆಂಬ ಕಡ್ಡಾಯ ನಿಯಮ ಸಡಿಲಿಸಿ ಜೂ.1ಕ್ಕೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು ದಾಖಲಿಸಿಕೊಳ್ಳಬಹುದೆಂದು ಇಲಾಖೆ ಆದೇಶ ಮಾಡಿದೆ.

ಮುಗಿಯದ ಗೊಂದಲ: ಸ್ಪಷ್ಟ ಆದೇಶಕ್ಕೆ ಶಿಕ್ಷಕರ ಆಗ್ರಹ

ವಯೋಮಿತಿ ಸಡಿಲಿಕೆ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಮಕ್ಕಳಿಗೆ ಮಾತ್ರ ಅನ್ವಯ ಎಂದು ಸರ್ಕಾರ ಮಾಡಿರುವ ಆದೇಶದಿಂದ ಹೊಸ ಗೊಂದಲ ಸೃಷ್ಟಿಯಾಗಿದೆ. ಇಲಾಖೆ ಸ್ಥಿತಿವಂತರ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆದೇಶ ಮಾಡಿದೆ, ಎಷ್ಟೋ ಬಡವರು, ಕೂಲಿ ಕಾರ್ಮಿಕರು, ವಲಸಿಗರು ತಮ್ಮ ಮಕ್ಕಳನ್ನು ಪೂರ್ವ ಪ್ರಾಥಮಿಕ ತರಗತಿಗೆ ಕಳುಹಿಸಿಲ್ಲ. ಕೆಲವರು ಅಂಗನವಾಡಿಗಳಿಗೆ ಕಳುಹಿಸಿದ್ದಾರೆ. ಅವರ ಮಕ್ಕಳಿಗೂ 5 ವರ್ಷ ಐದು ತಿಂಗಳು ವಯೋಮಿತಿ ಪೂರ್ಣಗೊಂಡಿದೆ. ಆದರೂ ಆ ಮಕ್ಕಳು 1ನೇ ತರಗತಿ ದಾಖಲಾತಿಯಿಂದ ವಂಚಿತರಾಗುವಂತಾಗಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.

ಇಂಥ ಮಕ್ಕಳು ದಾಖಲಾತಿಗೆ ಬರುವುದೇ ಸರ್ಕಾರಿ ಶಾಲೆಗಳಿಗೆ. ಇಲಾಖೆ ಆದೇಶದಲ್ಲಿ ಅಂಗನವಾಡಿಗೆ ಹೋಗುತ್ತಿರುವ ಹಾಗೂ ಪೂರ್ವ ಪ್ರಾಥಮಿಕ ತರಗತಿಗೆ ಹೋಗದಿರುವ ಆದರೂ ವಯೋಮಿತಿ ಪೂರ್ಣಗೊಂಡಿರುವ ಮಕ್ಕಳನ್ನು ನೇರವಾಗಿ 1ನೇ ತರಗತಿಗೆ ದಾಖಲಿಸಿಕೊಳ್ಳಬಹುದಾ? ಎನ್ನುವ ಬಗ್ಗೆ ಸ್ಪಷ್ಟ ಆದೇಶ ಮಾಡಿಲ್ಲ. ಇದರಿಂದ ಗೊಂದಲ ಉಂಟಾಗಿದೆ ಎಂದು ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು ಹೇಳುತ್ತಿದ್ದಾರೆ. ಈ ಬಗ್ಗೆ ಇಲಾಖೆ ಪರಿಷ್ಕೃತ ಆದೇಶ ನೀಡುವಂತೆ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು