ಮುಂಡರಗಿ: ಮಕ್ಕಳು ತಂದೆ-ತಾಯಿ, ಅಜ್ಜ-ಅಮ್ಮಂದಿರ ಹತ್ತಿರ ಹೋಗಿ, ಅವರ ಮಡಿಲಿನಲ್ಲಿ ಬೆಳೆದು, ಅವರಿಂದ ಹಾಡು, ಕತೆಗಳನ್ನು ಕೇಳಿದಾಗ ಅವರು ಸಂಸ್ಕಾರಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಗದುಗಿನ ಪ್ರೊ. ಕೆ.ಎಚ್. ಬೇಲೂರ ಹೇಳಿದರು.
ಮನೆಗಳು ನೆಮ್ಮದಿಯಾಗಿರುವುದೇ ಮಹಿಳೆಯರಿಂದ. ಮಹಿಳೆಯರು ಮನಸ್ಸು ಮಾಡಿದರೆ ಇಡೀ ಜಗತ್ತೇ ಉದ್ಧಾರವಾಗುತ್ತದೆ. ನಮ್ಮ ಜತೆಗೆ ಯಾವುದೇ ಆಸ್ತಿ-ಪಾಸ್ತಿ ಬರುವುದಿಲ್ಲ. ನಮ್ಮ ಜತೆಗೆ ಬರುವುದು ವಿದ್ಯೆ ಮಾತ್ರ. ಹೀಗಾಗಿ ತಾಯಂದಿರು ಮನೆಯಲ್ಲಿ ಮಕ್ಕಳಿಗೆ ಚೆನ್ನಾಗಿ ವಿದ್ಯೆ ಕಲಿಸುವ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮುಂಡರಗಿಯಲ್ಲಿ ಕಸಾಪ ಮಹಿಳಾ ಸಾಹಿತ್ಯ ಸಮಾವೇಶ ನಡೆಸುತ್ತಿರುವುದು ಖುಷಿ ತಂದಿದೆ ಎಂದು ಅಭಿನಂದಿಸಿದರು.
ಸವಣೂರಿನ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಿರಿಜಾ ಹಿರೇಮಠ ಮಾತನಾಡಿ, ಕನ್ನಡದ ಅಸ್ತಿತ್ವ ಉಳಿಸಿಕೊಂಡು ಹೊಸದಾಗಿ ಬರುವ ಸಾಹಿತ್ಯ ಬೆಳೆಸುವುದು ಕಸಾಪ ಪ್ರಮುಖ ಉದ್ದೇಶವಾಗಿದೆ. ಮಹಿಳೆಯರಿಗೆ ವಿಶೇಷ ಪ್ರೋತ್ಸಾಹ ನೀಡುವುದು ಈ ಮಹಿಳಾ ಸಾಹಿತ್ಯ ಸಮಾವೇಶದ ಉದ್ದೇಶ. ರೀಲ್ಸ್‌ಗಳನ್ನು ನೋಡಿ ಬೆಳೆಯುತ್ತಿರುವ ಮಕ್ಕಳಿಗೆ ರಿಯಲ್ ಆಗಿರುವ ಜೀವನದ ಕುರಿತು ಅರಿವಿಲ್ಲದಿರುವುದು ವಿಷಾದನೀಯ. ನಮ್ಮ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕನ್ನಡದ ಅಸ್ತಿತ್ವ ಉಳಿಸಿದಂತಾಗುತ್ತದೆ ಎಂದರು.ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ನಮ್ಮ ಸಮಾಜ ಮಹಿಳೆಯರಿಗೆ ಹೆಚ್ಚಿನ ಪ್ರೇರಣೆ ನೀಡುತ್ತಾ ಬಂದಿರುವುದರಿಂದ ಅವರು ಎಲ್ಲ ರಂಗಗಳಲ್ಲಿಯೂ ಬೆಳೆದು ನಿಂತಿದ್ದಾರೆ. ರಾಸಾಯನಿಕಮುಕ್ತ ಆಹಾರ ಪದಾರ್ಥಗಳನ್ನು ಬಳಕೆ ಮಾಡಬೇಕು. ಇದರಿಂದ ಆರೋಗ್ಯ ರಕ್ಷಿಸಿಕೊಳ್ಳುವ ಜತೆಗೆ ನಮ್ಮ ಸಾವಯವ ಕೃಷಿಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು. ಪ್ರೊ. ಎ.ಬಿ. ಹಿರೇಮಠ, ಸೀತಾ ಬಸಾಪುರ, ಅನ್ನದಾನಿ ಹಿರೇಮಠ ಮಾತನಾಡಿದರು.
ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯರಿಗೆ ಉತ್ತಮ ಸ್ಥಾನಮಾನವನ್ನು ನಮ್ಮ ದೇಶ ಯಾವಾಗಲೂ ಕೊಡುತ್ತಾ ಬಂದಿದೆ. ಮಾತೃ ದೇವೋ ಭವ ಎನ್ನುವ ಸಂಸ್ಕಾರವನ್ನು ನಮ್ಮ ಜನ ಕೊಡುತ್ತಾ ಬಂದಿದ್ದಾರೆ. ತಾಯಂದಿರು ತಮ್ಮ ಜೀವನದ ಹಲವಾರು ಜವಾಬ್ದಾರಿಗಳನ್ನು ಅರಿತು ಸಮಾಜದಲ್ಲಿ ಬಾಳುವಂತಹ ವ್ಯವಸ್ಥೆ ನಡೆದಿದೆ. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ, ಕೆಟ್ಟ ಭಾವನೆಯಿಂದ ನೋಡದೆ, ಪ್ರತ್ಯಕ್ಷವಾಗಿ ಏನು ನಡೆದಿದೆ ಎಂದು ಯೋಚಿಸಿ ಮಾತನಾಡಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದರು.