ಗದಗ: ಕಾರ್ಮಿಕರ ಹಕ್ಕುಗಳನ್ನು ಪಡೆಯಲು ಸಂಘಟನೆ ಹಾಗೂ ಹೋರಾಟ ಅಗತ್ಯವಾಗಿದೆ ಎಂದು ಶಿವಲಿಂಗ ಟರ್ಕಿ ತಿಳಿಸಿದರು.

ನಗರದಲ್ಲಿ ರಾಜ್ಯ ನೇಕಾರ ಸೇವಾ ಸಂಘ ವತಿಯಿಂದ ನಡೆದ 12ನೇ ವಾರ್ಷಿಕೋತ್ಸವ ಹಾಗೂ 103ನೇ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 1886ರ ಮೇ 1ರಂದು ಚಿಕಾಗೋದಲ್ಲಿ ಮೊದಲ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆರಂಭಗೊಂಡಿದ್ದು, ಭಾರತದಲ್ಲಿ 1923ರ ಮೇ 1ರಂದು ಚೆನ್ನೈನಲ್ಲಿ ಮೊದಲ ರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಯಿತು ಎಂದರು.

ಸಂಘದ ನಿರಂತರ ಹೋರಾಟದಿಂದ ನೇಕಾರ ಸನ್ಮಾನ ಯೋಜನೆ, 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಹಾಗೂ ಅಸಂಘಟಿತ ವಲಯದಲ್ಲಿ ನೇಕಾರರನ್ನು ಗುರುತಿಸುವಂಥ ಹಲವು ಸೌಲಭ್ಯಗಳು ದೊರೆತಿವೆ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ನಂದಾ ಹಣಬರಟ್ಟಿ, ಸಮಾಜದಲ್ಲಿ ಗುರುತಿಸಿಕೊಳ್ಳಲು ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ನಿವೃತ್ತ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಐಲಿ ಮಾತನಾಡಿ, ದುಡಿಯುವ ಕೈಗಳೇ ಶ್ರೇಷ್ಠವಾಗಿದ್ದು, ಸಂಘದ ಹೋರಾಟ ನ್ಯಾಯಸಮ್ಮತವಾಗಿದೆ. ಇನ್ನಷ್ಟು ಸೌಲಭ್ಯಗಳಿಗಾಗಿ ನೇಕಾರ ಸಮುದಾಯ ಹಾಗೂ ಕಾರ್ಮಿಕ ವರ್ಗ ಸಂಘದೊಂದಿಗೆ ಕೈಜೋಡಿಸಬೇಕು ಎಂದರು.


ಸಾನ್ನಿಧ್ಯ ವಹಿಸಿದ್ದ ನೀಲಕಂಠೇಶ್ವರ ಮಠದ ಗುರುಗಳು ಮಾತನಾಡಿ, ನೇಕಾರ ಸಂಘದ ಕಾರ್ಯಚಟುವಟಿಕೆ ಸಮಾಜಮುಖಿಯಾಗಿದ್ದು, ಬಡ ಕಾರ್ಮಿಕರ ಏಳಿಗೆಗಾಗಿ ಸಂಘ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದರು.

ಇದೇ ವೇಳೆ ಅಸಂಘಟಿತ ವಲಯದ ನೇಕಾರರು, ಕುಂಬಾರರು, ಟೈಲರ್‌ಗಳು, ಮನೆ ಕೆಲಸಗಾರರು, ಮೆಕ್ಯಾನಿಕ್‌ಗಳು, ಶಿಲ್ಪಿಗಳು ಸೇರಿದಂತೆ 20ಕ್ಕೂ ಹೆಚ್ಚು ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಆರಿ, ರಮೇಶ್ ಹತ್ತಿಕಾಳ, ಮಾಧುಸ ಮೆರವಡೆ, ರಾಜು ದಡಿ, ಬಸವರಾಜ ಕರಿ, ಕೃಷ್ಣ ಕೊಪ್ಪರದ, ವಿರುಪಾಕ್ಷಿ ಐಲಿ, ನಾರಾಯಣಪ್ಪ ಕೊನಿ, ಮಲ್ಲಿಕಾರ್ಜುನ ಗಡಿಗೆ ಉಪಸ್ಥಿತರಿದ್ದರು. ಶಂಕರ್ ಕಾಕಿ ಕಾರ್ಯಕ್ರಮ ನಿರೂಪಿಸಿದರು. ತಾರಾ ಐಲಿ ವಂದಿಸಿದರು.