ಶಿಗ್ಗಾಂವಿ: ಗುರು-ಶಿಷ್ಯ ಪರಂಪರೆ ಮತ್ತು ಭಾವೈಕ್ಯತೆಗೆ ಹೆಸರಾಗಿರುವ ಶರೀಫ ಶಿವಯೋಗಿ ಮತ್ತು ಗುರು ಗೋವಿಂದಭಟ್ಟರ ಅಧ್ಯಯನ ಪೀಠವನ್ನು ವಿಶ್ವವಿದ್ಯಾಲಯದ ಅಕಾಡೆಮಿಕ್ ಸಭೆಯಲ್ಲಿ ಚರ್ಚಿಸಿ ಅಧ್ಯಯನ ಪೀಠವನ್ನು ಆರಂಭಿಸಲು ಪ್ರಯತ್ನಿಸುವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.ತಾಲೂಕಿನ ಶಿಶುವಿನಹಾಳದ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿ ಮಠ ಟ್ರಸ್ಟ್ ಶಿಶುವಿನಹಾಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಹಾಗೂ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಹಾವೇರಿ ವಿಶ್ವವಿದ್ಯಾಲಯ ಹಾವೇರಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಸರಕಾರಿ ಪ್ರಥಮ ದರ್ಜೆ ಕಾಲೇಜು ಗುಡಗೇರಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಗ್ಗಾಂವಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿತು.ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಡಗೇರಿಯ ಎಲ್ಲಾ ಸಿಬ್ಬಂದಿಗಳು, ಶ್ರೀ ಶರೀಫಗಿರಿ ಟ್ರಸ್ಟ್ ಎಲ್ಲಾ ಸದಸ್ಯರು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಸಂಯೋಜಕರು ಸೇರಿ ಕುಲಪತಿಗಳಿಗೆ ಅಧ್ಯಯನ ಪೀಠ ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಕವಿವಿಯ ಕುಲಪತಿಗಳು, ನಮ್ಮ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ಅಧ್ಯಯನ ಪೀಠಗಳಿವೆ. ಆದರೆ ಈವರೆಗೂ ಯಾಕೆ ಶರೀಫರ ಮತ್ತು ಗುರು ಗೋವಿಂದಭಟ್ಟರ ಅಧ್ಯಯನ ಪೀಠವನ್ನು ಆರಂಭಿಸಿಲ್ಲ ಎಂಬುದು ಚಿಂತನೆಯ ವಿಷಯವಾಗಿದೆ. ಆದ್ದರಿಂದ ಗುರು-ಶಿಷ್ಯ ಪರಂಪರೆ ಮತ್ತು ಭಾವೈಕ್ಯತೆಯ ಉದ್ದೇಶದಿಂದ ಈ ಪೀಠವನ್ನು ಆರಂಭಿಸುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿ ಪೀಠ ಆರಂಭಿಸುವೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಸಂಯೋಜಕ ಡಾ. ಭೀಮೇಶ ಯರಡೋಣಿ ಕರ್ನಾಟಕ ವಿಶ್ವವಿದ್ಯಾಲಯವು ಅಧ್ಯಯನ ಪೀಠವನ್ನು ಸ್ಥಾಪಿಸಬೇಕು ಮತ್ತು ಸರ್ಕಾರವು ಪ್ರಾಧಿಕಾರವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಟ್ರಸ್ಟಿನ ಹಿರಿಯ ಸದಸ್ಯ ಚನ್ನಬಸಪ್ಪ ಬೆಟದೂರ ಇವರು ಮನೆಯಲ್ಲಿ ಮಕ್ಕಳಿರಬೇಕು ಮಠದಲ್ಲಿ ಮಂದಿ ಇರಬೇಕು. ಏಳು ದಿನ ನೀವು ಇಲ್ಲಿ ಇದ್ದದ್ದು ನಮಗೆ ತುಂಬಾ ಸಂತೋಷ ನೀಡಿದೆ. ನಿಮ್ಮ ಕಾರ್ಯವನ್ನು ಭಕ್ತರು, ಸಾರ್ವಜನಿಕರು ಮೆಚ್ಚಿದ್ದಾರೆ. ಹಾಗಾಗಿ ನಿಮಗೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು. ಮಠದ ಮತ್ತೋರ್ವ ಹಿರಿಯ ಸದಸ್ಯರಾದ ಬಸವರಾಜ ಮಳಲಿಯವರು ಅಧ್ಯಯನ ಪೀಠವನ್ನು ಆರಂಭಿಸಲು ಒತ್ತಾಯಿಸಿದರು.ಕವಿವಿ ಧಾರವಾಡ ರಾಷ್ಟ್ರೀಯ ಯೋಜನಾ ಕೋಶದ ಸಂಯೋಜಕ ಡಾ. ಎಂ.ಬಿ. ದಳಪತಿ ಮಾತನಾಡಿದರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಂಗಾಧರ ಗುಮ್ಮಗೋಳಮಠ ಶಿಶುವಿನಹಾಳದಲ್ಲಿ ಪ್ರತಿ ವರ್ಷವೂ ಈ ರೀತಿಯ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಹೇಳಿದರು. ನಾಯಕತ್ವ ತರಬೇತಿ ಮತ್ತು ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದ ಎರಡು ನೂರು ಜನ ಸ್ವಯಂಸೇವಕ ಸೇವಕಿಯರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಸಮಾರಂಭದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಆನಂದ ಇಂದೂರ, ಬಿ.ಸಿ.ಅಮಾತಿ, ದೇವರಾಜು, ಶಂಭುಲಿಂಗ ಬೆನ್ನೂರ, ಡಾ. ಸಂಗಪ್ಪ ಬಸರಕೋಡ ಭಾಗವಹಿಸಿದ್ದರು. ಎನ್. ಕೆ. ಕಡೇಮನಿ ನಿರೂಪಿಸಿದರು. ಡಾ. ಆನಂದ ಇಂದೂರ ವಂದಿಸಿದರು.